EDITORIAL


editorial

ಸಂಪಾದಕೀಯ

ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಇದು ಮುನ್ನುಡಿ

baikampadyy

ಇದು ಇಂದು ಜನಸಮೂಹದ ಇತಿಹಾಸವನ್ನು ಕಟ್ಟುವ ಕೆಲಸ. ಇತಿಹಾಸದ ಅರಿವೇ ಇರದ ನವಪೀಳಿಗೆಗೆ ಗತ ಇತಿಹಾಸವನ್ನು ನೆನಪಿಸಿ ಅವರ ಸ್ವಾಭಿಮಾನವನ್ನು ಅವರ ಕೈಗೆ ಕೊಡುವ ಅಮೂಲ್ಯ ಕೆಲಸ ಮತ್ತು ಅತೀ ಕಷ್ಟದ ಕೆಲಸ ಕೂಡಾ. ಇಂಥ ಸಾಹಸಕ್ಕೆ ಕೈಹಾಕಿರುವ ದಿನೇಶ್ ಬಂಗೇರ ಇರ್ವತ್ತೂರು ಅವರನ್ನು ಬೆಂಬಲಿಸುವುದು, ಅವರ ಕೈ ಬಲಪಡಿಸುವುದು ನನ್ನನ್ನೂ ಸೇರಿದಂತೆ ಕುಲಾಲ ಸಮುದಾಯದ ಹೊಣೆಗಾರಿಕೆ ಅಂದುಕೊಂಡಿದ್ದೇನೆ.
ವರ್ತಮಾನದಲ್ಲಿ ನಿಂತು ಭೂತಕಾಲವನ್ನು ಅವಲೋಕಿಸಿ ಭವಿಷ್ಯವನ್ನು ಕಟ್ಟಬೇಕು, ಹಾಗೆಯೇ ಕುಲಾಲ ಜನಸಮುದಾಯದ ಭವಿಷ್ಯವನ್ನು ರೂಪಿಸಬೇಕಾದರೆ ವರ್ತಮಾನದಲ್ಲಿರುವ ನಾವು ಭೂತಕಾಲದ ಮೇಲೆ ನೋಟ ಚೆಲ್ಲುವುದು ಅಗತ್ಯ. ಯಾಕೆಂದರೆ ಕಳೆದು ಹೋಗಿರುವ ಕಾಲದಲ್ಲಿ ಏನೆಲ್ಲಾ ಆಗಿ ಹೋಗಿದೆ ಎನ್ನುವುದು ಈಗಿನ ಪೀಳಿಗೆಯ ಹೊಸ ಕುಡಿಗಳಿಗೆ ಗೊತ್ತಿಲ್ಲ. ಅದನ್ನು ಗೊತ್ತುಪಡಿಸಬೇಕಾದರೆ ಅನಕ್ಷರಕುಕ್ಷಿಗಳಾಗಿದ್ದ ನಮ್ಮ ಹಿರಿಯರು ಅನುಭವಿಸಿರಬಹುದಾದ ಯಾತನೆ, ಸಹಿಸಿಕೊಂಡಿರಬಹುದಾದ ಅವಮಾನ, ಸ್ವಾಭಿಮಾನದ ಬದುಕಿಗಾಗಿ ಹಂಬಲಿಸಿರಬಹುದಾದ ಕಲ್ಪನೆಯನ್ನು ಈಗ ಊಹಿಸಿಕೊಂಡರೆ ಬಹುಷ ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕು, ಮೈಕೊಡವಿ ಸೆಟೆದು ನಿಲ್ಲಬೇಕು ಅನ್ನಿಸದಿರದು.
ನಮ್ಮ ಹಿರಿಯರ ಹೆಸರಿಗೆ ಯಾವ ಬಣ್ಣವೂ ಇರಲಿಲ್ಲ, ದೇವರ ಹೆಸರಿನ ಲೇಪನವೂ ಇರಲಿಲ್ಲ. ನಕ್ಕುರ, ಪಿಂಜಿರ, ದೂಮೆ, ತೋಮೆ, ಕರಿಯೆ ಇತ್ಯಾದಿ ಹೆಸರು. ರಾಮ, ಕೃಷ್ಣ, ಗೋವಿಂದ, ಶಿವರಾಮ ಎನ್ನುವ ಹೆಸರು ಇಟ್ಟುಕೊಳ್ಳಲೂ ಅನರ್ಹರು ಎನ್ನುವ ಸ್ಥಿತಿಯನ್ನು ದಾಟಿ ಬಂದಿದ್ದೇವೆ.
ಈಗ ನಮ್ಮ ಎದೆಯಲ್ಲೂ ಅಕ್ಷರಗಳು ಅರಳುತ್ತಿವೆ, ಹುಲುಸಾದ ಬೆಳೆ ಬೆಳೆಯುತ್ತಿದೆ. ಬೌದ್ಧಿಕವಾಗಿ ಬಲಿಷ್ಠರಾಗುತ್ತಿದ್ದೇವೆ. ವಿಜ್ಞಾನ, ಸಮಾಜಸೇವೆ, ದೇಶಸೇವೆ, ರಾಜಕೀಯ, ಕ್ರೀಡೆ, ಸಾಹಿತ್ಯ, ಕಲೆ, ಸಂಸ್ಕೃತಿ, ಶಿಕ್ಷಣ, ನ್ಯಾಯಾಂಗ, ವೈದ್ಯಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಜನಸಮುದಾಯ ಗುರುತಿಸಿಕೊಂಡಿದೆ. ಈಗ ನಮಗೆ ಕೀಳರಿಮೆ ಬೇಕಾಗಿಲ್ಲ, ಕೈಕಟ್ಟಿ ತಲೆತಗ್ಗಿಸಿ, ಮೈಬಗ್ಗಿಸಿ ದೂರಸರಿದು ನಿಲ್ಲಬೇಕಾಗಿಲ್ಲ. ಸ್ವಾಭಿಮಾನದಿಂದ ಬದುಕಬಲ್ಲೆವು, ಆತ್ಮವಂಚನೆ ಮಾಡಿಕೊಳ್ಳದೆ ಇತಿಹಾಸವನ್ನು ಹೇಳಿಕೊಳ್ಳಬಲ್ಲೆವು, ಇತರರಿಗೆ ಸರಿಸಮಾನವಾಗಿ ಗುರುತಿಸಿಕೊಳ್ಳುವ ಆತ್ಮಬಲ ಮನಗಿದೆ, ಸ್ವಾಭಿಮಾನವೂ ಇದೆ.
ಈಗ ನಮಗೆ ಬೇಕಾಗಿರುವುದು ಐಕ್ಯತೆ. ವಿಶ್ವದಾದ್ಯಂತ ಚದುರಿಹೋಗಿರುವ ನಮ್ಮ ಜನಸಮುದಾಯವನ್ನು ಒಂದು ಚೌಕಟ್ಟಿಗೆ ಒಳಪಡಿಸುವುದು. ಅದಕ್ಕೆ ವೇದಿಕೆ ಈ ವೆಬ್ ಸೈಟ್. ಬೆರಳತುದಿಯಲ್ಲಿ ನಮ್ಮ ಇತಿಹಾಸ, ನಮ್ಮ ನೆಲೆ, ನಮ್ಮ ಸಾಧನೆ, ನಮ್ಮ ಭವಿಷ್ಯದ ಗುರಿಯನ್ನು ಹುಡುಕುವುದು, ಹೊಸ ದಿಕ್ಕಿನತ್ತ ಮುನ್ನಡೆಯುವ ಸಾಧ್ಯತೆಗಳನ್ನು ತೋರಿಸುವುದು. ನಮ್ಮ ನೆಲ, ಜಲ, ಭಾಷೆ, ಕಲೆ, ಸಂಸ್ಕೃತಿಯನ್ನು ಪ್ರೀತಿಸಿ ಪೋಷಿಸಿ ಬೆಳೆಸುವ ದಿಕ್ಕಿನಲ್ಲಿ ಯೋಚಿಸುವುದು. ಇದೆಲ್ಲವನ್ನೂ ಸಾಕಾರಗೊಳಿಸಲು ಈ ವೆಬ್ ಸೈಟ್ ದಿಕ್ಸೂಚಿ ಮಾತ್ರವಲ್ಲ ನಮ್ಮ ಮುಖನೋಡಿಕೊಳ್ಳುವ ಕನ್ನಡಿ ಕೂಡಾ.
ಯಾವುದೇ ದೊಡ್ಡ ಗುರಿ ತಲಪುದಕ್ಕೆ ಬೇಕಾಗಿರುವುದು ಮೊದಲ ಒಂದು ಹೆಜ್ಜೆ. ಆ ಹೆಜ್ಜೆಯೇ ಈ ವೆಬ್ ಸೈಟ್ ಎನ್ನುವುದು ನನ್ನ ಗ್ರಹಿಕೆ. ನಮ್ಮಲ್ಲಿ ದೊಡ್ಡ ಪ್ರತಿಭೆಗಳಿವೆ, ಮಾಧ್ಯಮರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಯುವಪ್ರತಿಭೆಗಳಿವೆ. ಇವು ನಮ್ಮ ವೆಬ್ ಸೈಟ್ ಮುನ್ನಡೆಸುವುದಕ್ಕೆ ದೊಡ್ಡ ಸಂಪತ್ತು ಎನ್ನುವುದು ನನ್ನ ಬಲವಾದ ನಂಬಿಕೆ. ಈ ವೆಬ್ ಸೈಟ್ ನಲ್ಲಿ ದಿನೇಶ್ ಹೆಸರಿಸಿರುವ ಹೆಸರುಗಳ ಮೇಲೆ ಕಣ್ಣಾಡಿಸಿದರೆ ನನ್ನ ಮಾತನ್ನು ನೀವು ಖಂಡಿತಕ್ಕೂ ಒಪ್ಪಿಕೊಳ್ಳುತ್ತೀರಿ ಅಂದುಕೊಳ್ಳುತ್ತೇನೆ. ಯಾಕೆಂದರೆ ಸುದ್ದಿ, ಮಾಹಿತಿ ಹೂರಣವನ್ನು ಕೊಡಬೇಕಾದರೆ, ಚಿಂತನೆಗೆ ಹಚ್ಚುವ ಝಲಕ್ ಗಳನ್ನು ಕೊಡಬೇಕಾದರೆ ವೃತ್ತಿಪರತೆ ಇರುವ ಮತ್ತು ಬದ್ಧತೆ ಇರುವ ಮಾಧ್ಯಮದ ಅನುಭವ ಇರುವ ದೊಡ್ಡ ತಂಡವೇ ಬೇಕಾಗುತ್ತದೆ. ಆ ತಂಡಕ್ಕೆ ಖಂಡಿತಕ್ಕೂ ಕೊರತೆ ಇಲ್ಲ ಎನ್ನುವುದನ್ನು ದಿನೇಶ್ ಸಾಧಿಸಿ ತೋರಿಸಿದ್ದಾರೆ, ಇದು ಎಷ್ಟು ನಿಜ ಎನ್ನುವುದನ್ನು ದಿನಕಳೆದಂತೆ ನೀವೇ ಗುರುತಿಸುತ್ತೀರಿ ಎನ್ನುವುದು ನನ್ನ ನಂಬಿಕೆ.
ನಾನು ಮೊದಲೇ ಹೇಳಿದಂತೆ ಈ ವೆಬ್ ಸೈಟ್ ನಮ್ಮ ಕೈಗನ್ನಡಿ ಆಗಬೇಕು. ಇದರಲ್ಲಿ ನಮ್ಮ ಸಮುದಾಯದ ಪ್ರತಿಯೊಂದು ಪ್ರತಿಭೆಯ ದಾಖಲೀಕರಣವಾಗಿ ಚಿಟಿಕಿ ಹೊಡೆದರೆ ಆ ಮಾಹಿತಿಯ ಪುಟ ತೆರೆದುಕೊಳ್ಳಬೇಕು. ಇದು ನಮ್ಮ ಜನಸಮುದಾಯದ ಡಿಕ್ಷನರಿಯಾಗಬೇಕು. ಯಾವ ಮಾಹಿತಿಗೂ ಕೊರತೆ ಇರಬಾರದು, ವೃತ್ತಿ-ಪ್ರವೃತ್ತಿಯಿಂದ ಹಿಡಿದು ಪ್ರತಿಯೊಂದು ಕ್ಷೇತ್ರಗಳ ಸಮಗ್ರ ಮಾಹಿತಿ ಅದರ ಸಾಧಕರ ಸಾಧನೆಯ ಪರಿಪೂರ್ಣ ಚರಿತ್ರೆ ಒಳಗೊಂಡಿರಬೇಕು. ಇದೆಲ್ಲವೂ ಸಾಕಾರಗೊಳ್ಳಬೇಕಾದರೆ ಪ್ರತಿಯೊಬ್ಬರ ನೆರವೂ ಬೇಕು. ಒಂದು ತಂಡವಾಗಿ ನಮ್ಮ ಇತಿಹಾಸವನ್ನು ಕಟ್ಟುತ್ತಿದ್ದೇವೆ, ಮುಂದಿನ ಭವಿಷ್ಯವನ್ನು ರೂಪಿಸುತ್ತಿದ್ದೇವೆ ಎನ್ನುವ ಧ್ಯೇಯ ಹಾಗೂ ಬದ್ಧತೆಯಿಂದ ನಮ್ಮ ನಮ್ಮ ಕಾಣಿಕೆಯನ್ನು ಸಲ್ಲಿಸುವ ಉದಾರತೆ ತೋರಬೇಕು.
ಸರ್ವಜ್ಞ ನಮ್ಮ ಸ್ವಾಭಿಮಾನದ ಸಂಕೇತ, ನಮ್ಮ ಅರಿವಿನ ಗುರು, ನಮಗೆ ಮಾದರಿ. ಸರ್ವಜ್ಞ ಎನ್ನುವ ಮೂರಕ್ಷರವನ್ನು ಸ್ಮರಿಸುತ್ತಾ ಮುನ್ನಡೆಯೋಣ. ನಮ್ಮ ಉದ್ದೇಶ ಸಾಧನೆಗಾಗಿ ಮೊದಲ ಹೆಜ್ಜೆ ಇಡೋಣ. ಸ್ವಾಭಿಮಾನಿಗಳಾಗಿ ಬದುಕು ಕಟ್ಟಿಕೊಳ್ಳೋಣ, ಇತರರಿಗೂ ಮಾದರಿಯಾಗೋಣ.
ನಾವು ಯಾರಿಗೂ ಸ್ಪರ್ಧಿಗಳಲ್ಲ, ಯಾರೊಂದಿಗೂ ಪೈಪೋಟಿಗಿಳಿಯುವುದಿಲ್ಲ. ನಾವು ನಮಗಾಗಿ, ನಮ್ಮವರ ನಾಳೆಗಾಗಿ ಸುಂದರ ಕನಸು ಕಟ್ಟಿಕೊಂಡು ಬದುಕುವ ಸಂಕಲ್ಪ ಮಾಡೋಣ. ಅಬ್ದುಲ್ ಕಲಾಂ ಹೇಳಿದಂತೆ ನಾವು ಕನಸು ಕಾಣಬೇಕು, ಅವು ನಿದ್ದೆಯಲ್ಲಿ ಬೀಳುವ ಕನಸಲ್ಲ. ನಿದ್ದೆ ಮಾಡಲು ಬಿಡದಂಥ ಕನಸುಗಳು. ಆ ಕನಸಿಗೆ ಈಗ ಬಿಜಾಂಕುರವಾಗುತ್ತಿದೆ. ಅದು ಮೊಳೆತು, ಚಿಗಿತು, ಗಿಡವಾಗಿ, ಮರವಾಗಿ ಕಾಯಿ, ಹಣ್ಣು ಕೊಡುವ. ನೆಮ್ಮದಿಯ ನೆರಳು ಕೊಡುವ, ನಾವೆಲ್ಲರೂ ಆ ಮರದ ಆಸರೆಯಲ್ಲಿ ಬದುಕುವಂಥ ಕನಸು ಕಾಣುತ್ತಾ ಮುನ್ನಡೆಯೋಣ.

ಸಂಪಾದಕೀಯ

ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರವಿರಲಿ…

editorial2

ತಂತ್ರಜ್ಞಾನ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಹೀಗಾಗಿ ಇವತ್ತಿನ ದಿನಗಳಲ್ಲಿ  ಜಗತ್ತೇ ನಮ್ಮ ಅಂಗೈಯಲ್ಲಿದೆ ಎಂಬುವಷ್ಟರ ಮಟ್ಟಿಗೆ ನಮ್ಮ ಸಂಪರ್ಕ ಜಾಲ ದೇಶ, ವಿದೇಶಗಳನ್ನು ಬೆಸೆಯುತ್ತಾ ಸಾಗುತ್ತಿದೆ. ಒಂದು ಕಾಲದಲ್ಲಿ ಯಾವುದಾದರೂ ವಿಷಯಗಳ ಬಗ್ಗೆ  ಮಾಹಿತಿ ಬೇಕು ಎಂದಾದಲ್ಲಿ ಗೃಂಥಾಲಯದತ್ತ ಜನ ಹೆಜ್ಜೆ ಹಾಕುತ್ತಿದ್ದರು. ಈಗ ಹಾಗಿಲ್ಲ. ಹೆಚ್ಚಿನವರು ಇಂಟರ್‍ನೆಟ್‍ನತ್ತ ಮುಖ ಮಾಡುತ್ತಾರೆ. ಗೂಗಲ್‍ನಲ್ಲಿ ನಮಗೆ ಬೇಕಾದ ವಿಷಯದ ಬಗ್ಗೆ ಮಾಹಿತಿಯಿದೆಯಾ ಎಂದು ಹುಡುಕಾಟ ನಡೆಸುತ್ತಾರೆ. ಇವತ್ತು ಅಂತರ್ಜಾಲ ಮಾಹಿತಿ, ಸಂಪರ್ಕ, ಮನೋರಂಜನೆ ನೀಡುವುದರೊಂದಿಗೆ ಜನತೆಯ ನಡುವಿನ ಸಂಪರ್ಕಕೊಂಡಿಯಾಗಿದೆ ಎಂದರೆ ತಪ್ಪಾಗಲಾರದು. ಹೀಗಿರುವಾಗ ಅಂತರ್ಜಾಲವನ್ನು ಜಾಲಾಡುವವರಿಗೆ ಮೂಲತಃ ಕರ್ನಾಟಕದ ಕುಂಬಾರ ಸಮಾಜದವರಾಗಿ ಉದ್ಯೋಗ ನಿಮಿತ್ತ ಹೊರರಾಜ್ಯ, ಹೊರದೇಶಗಳಿಗೆ ತೆರಳಿ ಅಲ್ಲಿ ನೆಲೆಸಿದವರಿಗೆ ಮತ್ತು ನಮ್ಮ ಸಮಾಜದ ಬಗ್ಗೆ ಮಾಹಿತಿ ಪಡೆಯಲು ತಡಕಾಡುವವರಿಗಾಗಿ, ಇಲ್ಲಿ ಏನೇನು ನಡೆಯುತ್ತಿದೆ ಎಂಬಿತ್ಯಾದಿ ತತ್ ಕ್ಷಣದ ಸುದ್ದಿಗಳಲ್ಲದೆ, ಸಮಾಜದ ಸಮಗ್ರ ಮಾಹಿತಿಯನ್ನು ನಾವು kulalworld ವೆಬ್‍ಸೈಟ್ ಮೂಲಕ ಒದಗಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಉನ್ನತ ಆದರ್ಶಗಳನ್ನು ಹಾಗೂ ಮೌಲ್ಯಗಳನ್ನು ಜಗತ್ತಿಗೆ ನೀಡಿದ ನಮ್ಮ ಕುಲಾಲ/ಕುಂಬಾರ ಸಮಾಜ ಕಾಲನ ಹಿಡಿತಕ್ಕೆ ಸಿಕ್ಕಿ ಅನ್ಯಾಯವಾಗಿ ಉಪೇಕ್ಷೆ ಹಾಗೂ ದೊಷಣೆಗಳಿಗೆ ಒಳಗಾಗುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಉನ್ನತವಾದ ಸಾಮಾಜಿಕ ಕೊಡುಗೆಗಳನ್ನು ಹಾಗೂ ಆದರ್ಶಗಳನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ವಿಶ್ವವ್ಯಾಪಕತೆಯನ್ನು ಹೊಂದಿರುವ ಜಾಗೃತ ಮಾಹಿತಿ ವ್ಯವಸ್ಥೆಯನ್ನು ಹೊಂದುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಜಾಲತಾಣ ಪರಿಣಾಮಕಾರಿಯಾದ ಸಂವಹನ ವ್ಯವಸ್ಥೆಯನ್ನು ಹೊರಹೊಮ್ಮುವ ಆಶಯ ನಮ್ಮದು. ನಮ್ಮ ಪರಂಪರೆಯ ಮೌಲಿಕತೆಯನ್ನು ಆಧುನಿಕ ವ್ಯವಸ್ಥೆಯ ಮೂಲಕ ಇಂದಿನ ಜನಾಂಗಕ್ಕೆ ಶೀಘ್ರವಾಗಿ ಪರಿಚಯಿಸುವ ಪರಿಚಯಿಸಲು ಹಾಗೂ ಸಮಾಜ ಬಾಂಧವರಲ್ಲಿ ಒಗ್ಗಟ್ಟು ಹಾಗೂ ಜಾಗೃತಿ ಮೂಡಿಸುವಲ್ಲಿ ಹಾಗೂ ಕುಂಬಾರ ಸಮಾಜದ ಬಗ್ಗೆ ಅನ್ಯ ಸಮಾಜದಲ್ಲಿರುವ ತಪ್ಪು ಮಾಹಿತಿಗಳು ಹಾಗೂ ಸಂದೇಹ ಹಾಗೂ ಆಕ್ರೋಶಗಳನ್ನು ದೂರಮಾಡುವಲ್ಲಿ ಈ ವೆಬ್ ಸೈಟ್ ಸಹಕಾರಿಯಾಗಲೆಂದು ಬಯಸುತ್ತೇವೆ.
ಮನುಷ್ಯನ ಪ್ರಗತಿಯ ಹೆಜ್ಜೆಗಳು ವಿಸ್ತಾರವಾದಂತೆಲ್ಲ ಆತನ ಬದುಕಿನ ನೆಲೆಯೂ ಬಹಳ ವೇಗವಾಗಿ ಪಸರಿಸುತ್ತದೆ. ಕುಲಾಲ ಸಮುದಾಯವೂ ಇದಕ್ಕೇನೂ ಹೊರತಲ್ಲ. ಎಷ್ಟೋ ವರ್ಷಗಳ ನಿರಂತರ ಶ್ರಮ ಹಾಗೂ ಬೌದ್ಧಿಕ ಸಾಮರ್ಥ್ಯದ ಸಮರ್ಪಕ ಬಳಕೆಯಿಂದ ನಮ್ಮ ಬಹಳಷ್ಟು ವ್ಯಕ್ತಿಗಳು – ಕುಟುಂಬಗಳು ದೇಶದ ಅನ್ಯಾನ್ಯ ಪ್ರದೇಶಗಳಲ್ಲಲ್ಲದೆ ವಿದೇಶಗಳಲ್ಲೂ ತಮ್ಮ ಬದುಕಿನ ನೆಲೆ ಕಂಡಿದ್ದಾರೆ.  ಕುಂಬಾರ, ಕುಲಾಲ,ಮೂಲ್ಯ, ಗುನಗ ಮುಂತಾದ ಹೆಸರುಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಚದುರಿ ಹೋಗಿರುವ ಸುಮಾರು 20 ಲಕ್ಷ ಜನಸಂಖ್ಯೆಯಿರುವ ಕುಂಬಾರ ಸಮುದಾಯದವರು ಆಧುನಿಕ ತಂತ್ರಜ್ಞಾನದ ಒತ್ತಡದಿಂದ ಹಾಗೂ ಲೋಹ ಮತ್ತು ಪ್ಲಾಸ್ಟಿಕ್ ಬಳಕೆಯಿಂದಾಗಿ ತಮ್ಮ ಕುಲ ಕಸುಬಿಗೆ ಬೇಡಿಕೆ ಕಳೆದುಕೊಂಡು, ಜನಾಂಗದ ಬಹುಪಾಲು ಜನರು ಸ್ವಂತ ಕೃಷಿಭೂಮಿ ಅಥವಾ ಬೇರೆ ಪರ್ಯಾಯ ಉದ್ಯೋಗಗಳಿಲ್ಲದೇ ಸಾಮಾಜಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕುಂಬಾರ ಜನಾಂಗದವರು ತಮ್ಮ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಉಳಿವಿಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜದ ಗಣ್ಯರು ಸಮಾನಮನಸ್ಕರಾಗಿ ಒಂದೇ ಲಾಂಛನದಡಿಯಲ್ಲಿ ಒಟ್ಟುಗೂಡಿ ಅಭೂತಪೂರ್ವ ಒಗ್ಗಟ್ಟನ್ನು ಪ್ರದರ್ಶಿಸಿ ಜನಾಂಗದ ಸದಸ್ಯರು ಗೌರವಯುತ ಹಾಗೂ ಸ್ವಾಭಿಮಾನದ ಜೀವನ ನಡೆಸಲು ಸಹಕರಿಸುವ,ಈ ರೀತಿ ಬಹಳ ವಿಸ್ತಾರವಾಗಿ ಹಂಚಿಹೋಗಿರುವ ನಮ್ಮ ಕುಲಾಲ ಸಮುದಾಯವನ್ನು ಮಾಹಿತಿ ವಿನಿಮಯದ ಮೂಲಕ ಏಕಸೂತ್ರದಲ್ಲಿ ಸಂಧಿಸುವಂತೆ ಮಾಡುವ ಮಹತ್ವದ ಉದ್ದೇಶವೂ ನಮ್ಮದಾಗಿದೆ.
ಕೃಷಿಯೇತರ ವೃತ್ತಿಯನ್ನು ಜೀವನಾಧಾರವಾಗಿ ಅಳವಡಿಸಿಕೊಂಡ ಬಹುತೇಕ ಮಂದಿ ಸಹಜವಾಗಿ ಪರಸ್ಪರ ಭೇಟಿಯಾಗುವ ಅವಕಾಶಗಳಿಂದ ವಂಚಿತರಾಗುತ್ತಾರೆ. ಇಷ್ಟೇ ಅಲ್ಲದೆ ಊರು ಬಿಟ್ಟು ಪರ ಊರಲ್ಲಿ ನೆಲೆಸಿರುವ ಎಲ್ಲಾ ಕುಲಾಲ ಬಾಂಧವರಿಗೂ ಊರಿನ ಆಗುಹೋಗುಗಳ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಿರುವುದಿಲ್ಲ. ಮಾತ್ರವಲ್ಲದೆ, ಕುಲಾಲ ಸಮುದಾಯದ ಮೂಲ , ಚಾರಿತ್ರಿಕ ಹಿನ್ನೆಲೆ , ನಮ್ಮ ಆಚಾರ-ವಿಚಾರ , ಹಬ್ಬ ಹರಿದಿನ , ಧಾರ್ಮಿಕ -ಶೈಕ್ಷಣಿಕ ಕೇಂದ್ರ, ಕ್ರೀಡೆ ಇತ್ಯಾದಿಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ  ಹಿನ್ನೆಲೆಯಲ್ಲಿ ನಮ್ಮದೊಂದು ಹೆಜ್ಜೆ. ಕುಲಾಲ ಸಮುದಾಯದ ಪ್ರತಿಭಾನ್ವಿತರನ್ನು, ಗಣ್ಯರನ್ನು ಗುರುತಿಸಿ ಎಲ್ಲಾ ಕುಲಾಲರಿಗೆ ಅವರ ಪರಿಚಯ ಮಾಡಿಸುವುದು ಜೊತೆಗೆ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ, ಅಸಹಾಯಕರಿಗೆ ನೆರವು ನೀಡುವುದು ಅಲ್ಲದೆ, ನಮ್ಮ ಪರಂಪರೆಯ ಬಗ್ಗೆ ಇನ್ನಷ್ಟು ಉಪಯುಕ್ತ ಮಾಹಿತಿಯನ್ನು ಸುಲಭದಲ್ಲಿ ಲಭ್ಯವಾಗುವಂತೆ ಮಾಡುವುದು ಇನ್ನೊಂದು ಉದ್ದೇಶ. ಇದರ ವ್ಯಾಪಕತೆ ಹಾಗೂ ಒಪ್ಪವನ್ನು ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ವೇದಿಕೆಯಿಂದ ನಮ್ಮ ಸಮಾಜಕ್ಕೆ ಒಂದಷ್ಟು ಪ್ರಯೋಜನವಾದರೆ ಅದೇ ಸಾರ್ಥಕತೆ. ನಮ್ಮ-ನಿಮ್ಮ ಬಾಂಧವ್ಯದ ಕೊಂಡಿ ಅಂತರಜಾಲದ ಅಕ್ಷರ ಲೋಕದ ಮೂಲಕ ಸದಾ ಹಸನಾಗಿರಲಿ. ತಪ್ಪುಗಳಿದ್ದರೆ ಮನ್ನಿಸಿ.
ಈ ವೆಬ್‍ಸೈಟ್ ಸಮಗ್ರ ಮಾಹಿತಿಯೊಂದಿಗೆ ಎಲ್ಲರ ಗಮನಸೆಳೆದು ಜನಪ್ರಿಯವಾಗ ಬೇಕಾದರೆ ನೀವು ನಮ್ಮೊಂದಿಗೆ ಕೈಜೋಡಿಸಬೇಕಾದ ಅಗತ್ಯವಂತೂ ಇದ್ದೇ ಇದೆ.
ನಿಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮ, ನಿಮ್ಮ ಮನೆಯಲ್ಲಿ, ಕುಟುಂಬ, ಬಂಧುಮಿತ್ರರು, ಗೆಳೆಯ, ಗೆಳತಿಯರು ಒಂದಲ್ಲಾ ಒಂದು ರೀತಿಯ ವಿಶಿಷ್ಟ ಸಾಧನೆ ಮಾಡುತ್ತಿದ್ದರೆ (ಕಲೆ, ಸಾಹಿತ್ಯ, ಕೃಷಿ, ಇತರೆ) ಅವರ ವಿವರವನ್ನು ಚಿತ್ರ ಸಹಿತ ಕಳುಹಿಸಿಕೊಡುವ ಮೂಲಕ, ನೀವು ಬರಹಗಾರರಾಗಿದ್ದಲ್ಲಿ, ಅಥವಾ ಬರವಣಿಗೆಯಲ್ಲಿ ಆಸಕ್ತಿಯಿದ್ದರೆ ಕಥೆ, ಕವಿತೆ, ಲೇಖನವನ್ನು, ನಿಮ್ಮ ಸುತ್ತಮುತ್ತ ಇರುವ ಕುಲಾಲ/ಕುಂಬಾರ ಸಮಾಜದ  ಮಾಹಿತಿಯನ್ನು ಕೂಡ ನೀಡಬಹುದಾಗಿದೆ. ನೀವು ಕಳುಹಿಸುವ ಬರಹಗಳನ್ನು ಪರಿಶೀಲಿಸಿ ಸೂಕ್ತವಾಗಿದ್ದಲ್ಲಿ ಪ್ರಕಟಣೆ ಮಾಡುವ ಜವಾಬ್ದಾರಿ ನಮ್ಮದಾಗಿದೆ. ವೆಬ್ ಅನ್ನು ನಮ್ಮ ಜನಾಂಗದ ಗೆಳೆಯ-ಗೆಳತಿಯರಿಗೆ ಪರಿಚಯಿಸಿ-ಬೆಳೆಸಿ ಇದು ನಮ್ಮ ವೇದಿಕೆ. ಎಲ್ಲವೂ ಸಾಕಾರಗೊಳ್ಳಬೇಕಾದರೆ ನೀವು ನಮ್ಮೊಂದಿಗೆ ಕೈಜೋಡಿಸಲೇ ಬೇಕು.  ಅದನ್ನು ನೀವು ಮಾಡುತ್ತೀರೆಂಬ ವಿಶ್ವಾಸದಲ್ಲಿ ನಾವಿದ್ದೇವೆ.
* ದಿನೇಶ್ ಬಂಗೇರ ಇರ್ವತ್ತೂರು

ಸಂಪಾದಕೀಯ

ಸಮಾಜದ ಧ್ವನಿಯಾಗಬಲ್ಲ ಮಾಧ್ಯಮಕ್ಕೆ ಬೆಂಗಾವಲಾಗಬೇಕಾದುದು ನಮ್ಮೆಲ್ಲರ ಬದುಕಿನ ಭಾಗ

editorial3

ಅಕ್ಷರಕೃಪೆಗೆ ಒಳಗಾಗಿ ತಮ್ಮ ಸಮುದಾಯದ ಅಳಿವು-ಉಳಿವಿಗಾಗಿ ಐಕ್ಯಮಾತ್ಯ ಮತ್ತು ಅಧಿಕಾರದ ಚುಕ್ಕಾಣಿಯನ್ನು ಎಡಬಿಡದೇ ಹಿಡಿದು, ಅಧಿಕಾರ, ಅಂತಸ್ತು, ವಿದ್ಯೆಯನ್ನು ಕರಗತ ಮಾಡಿಕೊಂಡು, ಮಾನವ ಕುಲದಲ್ಲಿ ತಾವೇ ಶ್ರೇಷ್ಠರೆಂದು ಭ್ರಮಿಸಿಕೊಂಡು ಜೀವನದ ಎಲ್ಲಾ ಸಮಲತ್ತುಗಳನ್ನು ತಮ್ಮೆಡೆಗೆ ನಿರಾಯಾಸವಾಗಿ ಸೆಳೆದುಕೊಂಡು, ಅವರದ್ದೇ ಇತಿಹಾಸದ ಬಗ್ಗೆ ವರ್ಣರಂಜಿತವಾಗಿ ಸಾವಿರಾರು ಗ್ರಂಥ, ಪುರಾಣಗಳನ್ನು ಬರೆದು ಇತಿಹಾಸ ನಿರ್ಮಿಸಿರುವ ಜನಾಂಗ ಒಂದೆಡೆ ಇದ್ದರೆ, ಮನುಷ್ಯನ ಬದುಕಿನ ಮೂಲಭೂತ ಅವಶ್ಯಕತೆಗಳ ಪೂರೈಕೆಗಾಗಿ, ದೈಹಿಕ, ಮಾನಸಿಕ ಶ್ರಮದಿಂದ ಸದಾ ಎತ್ತುಗಳಂತೆ ದುಡಿಯುತ್ತಾ, ಈ ಜಗತ್ತಿನ ನಾಗರೀಕತೆ, ಸಂಸ್ಕೃತಿಗೆ ತಮ್ಮದೇ ಆದ ವಿಶಿಷ್ಟ ಕಾಣಿಕೆಗಳನ್ನು ನೀಡುತ್ತಾ ಬಂದು, ಬೇರೆಯವರ ಬದುಕನ್ನು ಹಸನು ಮಾಡಲು, ಬೇಯಿಸಿ ತಿನ್ನಿ ಎಂದು ಹಸಿ ತಿನ್ನುತ್ತಿದ್ದವರಿಗೆ ಸಂಸ್ಕಾರ ಹೇಳಿಕೊಟ್ಟು, ಬೇರೆಯವರ ಕ್ರಿಯೆಗಳಿಗೆ ಬೆನ್ನೆಲುಬಾಗಿ ನಿಂತು, ರಕ್ತಮಾಂಸವಾಗಿ ಹರಿದು, ಅನ್ಯರ ವರ್ಚಸ್ಸು-ವೈಭವಗಳಿಗೆ ಉಸಿರಾಗಿ ನಿಂತು, ಗುಪ್ತಗಾಮಿನಿಯಾಗಿರುವ ಜನಾಂಗಗಳು ಇನ್ನೊಂದೆಡೆ. ಇಂತಹ ಜನಾಂಗಗಳಲ್ಲೇ ಅತೀ ಪುರಾತನವಾದ ಮೂಲ ಕಸುಬಿನ ಜನಾಂಗವೇ ಕುಂಬಾರಿಕೆಯನ್ನು ಜೀವಂತವಾಗಿಟ್ಟಿರುವ ಕುಂಬಾರರು.
ದುರ್ಜನರು ಸಜ್ಜನರಾಗಲಿ, ಸಜ್ಜನರಿಗೆ ಶಾಂತಿ ದೊರಕಲಿ, ಸಾಧಕರು, ಜನನ ಮರಣ ಬಂಧನದಿಂದ ಮುಕ್ತರಾಗಲಿ, ಜೀವನದ ಜಂಜಡದಿಂದ ಮುಕ್ತಾದವರು ಇತರರನ್ನು ಮುಕ್ತಿಗೊಳಿಸಲಿ ಎಂಬ ಹಿರಿಯರ ನುಡಿಯಂತೆ, ಸಭ್ಯ ಸಮಾಜ, ಸಂಸ್ಕೃತಿ, ಆಚಾರ-ವಿಚಾರ, ಸಂಸ್ಕಾರಗಳನ್ನು ಜಗತ್ತಿನಾದ್ಯಂತ ಹಂಚಿಕೊಂಡು, ತಗ್ಗಿ-ಬಗ್ಗಿ, ಒಗ್ಗಿಕೊಂಡು, ಸತ್ಯ ಸಂಧತೆಯ ಹರಿಕಾರರಾಗಿ ಬದುಕುವ ಜನಾಂಗಗಳಲ್ಲಿ ಕುಂಬಾರ ಜನಾಂಗವೂ ಒಂದು. `ಹಿಂದಣ ಹೆಜ್ಜೆಯನರಿವಿಲ್ಲದೆ ನಿಂತ ಹೆಜ್ಜೆಯನರಿಯಬಾರದು’ ಎಂಬ ಅಲ್ಲಮಪ್ರಭುವಿನ ಅಂಬೋಣದಂತೆ, ನಿಂತ ಹೆಜ್ಜೆ ಅಂದರೆ ವರ್ತಮಾನವನ್ನು ಅರಿಯಬೇಕಾದರೆ ಹಿಂದಣ ಹೆಜ್ಜೆಯನ್ನು ಅಂದರೆ ಒಂದು ಕುಲ, ಗುಂಪು, ಸಂಸ್ಥೆ, ಸಂಘಟನೆಯ ಪರಂಪರೆ, ಚರಿತ್ರೆ, ಹೋರಾಟ, ತ್ಯಾಗವನ್ನು ಅರಿಯಲೇಬೇಕು. ಆಗಲೇ ನಮಗೆ ನಾವು ಇಡುತ್ತಿರುವ ಹೆಜ್ಜೆಯ ಮಹತ್ವ ಅರಿಯುವುದು. ಹಾಗಾಗಿ ಕುಲಾಲ/ಕುಂಬಾರ ಜನಾಂಗದ ಈಗಿನ ಆಗುಹೋಗುಗಳನ್ನು ಅರಿಯಬೇಕಾಗದಲ್ಲಿ ಅದರ ಹಿಂದೆ ಇರುವ ಹಿರಿಯರ ಶ್ರಮ, ಬೆವರು ಜೀವನೋತ್ಸಾಹವನ್ನು ಪರಿಚಯಿಸಿಕೊಳ್ಳಲೇಬೇಕು. ದೇಶವನ್ನು ಒಳಗೊಂಡ ಈ ಜಗತ್ತು ತಲ್ಲಟಗೊಳಿಸುವ ಹಲವು ಬೌತಿಕ, ಸಾಮಾಜಿಕ, ಮಾನಸಿಕ, ಆಥರ್ಿಕ ತಲ್ಲಣಗಳಿಗೆ ಒಳಗಾಗುತ್ತಿದೆ. ಒಂದು ಕಡೆ ಯಂತ್ರ ವಿಜ್ಞಾನ ಅಮಾಹ್ಯವೇಗದಲ್ಲಿ ಧಾವಿಸುತ್ತಿದ್ದರೂ ಸಹಾ ಅದಕ್ಕೆ ಸಮಾನಾಂತರವಾಗಿರುವ ಬದುಕಿನ್ನೂ ದಾರಿದ್ರ್ಯ, ಅನಕ್ಷರತೆ, ಅಜ್ಞಾನ, ಮೂಢನಂಬಿಕೆಗಳಲ್ಲಿ ಜೋತುಬಿದ್ದು ಜೋಕಾಲಿಯಾಡುತ್ತಿದೆ. ರಾಜಕೀಯ ಸ್ಥಿತ್ಯಂತರಗಳು, ಆಕ್ರಮಣಕಾರಿ ಮನೋಭಾವಗಳು, ಅಂತರ್ ಯುದ್ಧಗಳು, ಬಹುಕಾಲದ ಬದುಕಿನ ಸಿದ್ಧಾಂತಗಳನ್ನು ಗಾಳಿಗೆ ತೂರಿ ಮೇಲೇರಿ ಬರಲು ಹಪಹಪಿಸುತ್ತಿದ್ದೇವೆ. ಗಂಡಾಗುಂಡಿಯನ್ನಾದರೂ ಮಾಡಿ ಗಡಿಗೆ ತುಪ್ಪ ಕುಡಿಯುವ ಆತುರದಲ್ಲಿ ಇಡೀ ಜಗತ್ತಿದೆ. ಮನುಷ್ಯನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ನಮ್ಮ ವ್ಯವಸ್ಥಗೆಳು ಏದುಸಿರು ಬಿಡುತ್ತಿವೆ. ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ಹಳಸುತ್ತಿವೆ. ಮಾನವತಾವಾದ ಪುಸ್ತಕದ ಬದನೆಕಾಯಿಯಾಗಿದೆ.  ಜಾತ್ಯಾತೀತತೆ ಎಂಬುದು ಮೊಸಳೆಕಣ್ಣೀರಾಗಿದೆ.
ಸಮಾಜಕ್ಕಿಂದು ಭದ್ರ ಬುನಾದಿ ಹಾಗೂ ಕಠಿಣ ದುಡಿಮೆಯ ದಂಡು ಬೇಕಾಗಿದೆ. ಹಳೆ ಬೇರು ಹೊಸ ಚಿಗುರು ಸಮಾನಾಂತರವಾಗಿ ಬೆಳೆಯ ಬೇಕಾಗಿದೆ. ಬೇರಿದ್ದರೆ ಚಿಗುರಿಲ್ಲ, ಚಿಗುರಿದ್ದರೆ ಬೇರಿಲ್ಲ ಎಂಬಂತಾಗಬಾರದು. ಕ್ರಿಯಾಶೀಲತೆ, ಕಲ್ಪನಾಶಕ್ತಿ ಹಾಗೂ  ಉತ್ಸಾಹ ಚಿಲುಮೆಗಳಾಗಬೇಕಿದ್ದ ಯುವಕರಿಂದು ಹೆಂಡ, ಹಣ, ಧೂಮ್ರಪಾನ, ಮಾದಕದ್ರವ್ಯಗಳ ಗುಲಾಮಾಗುತ್ತಿದ್ದಾರೆ. ಯುವ ಪೀಳಿಗೆಯ ಕೈಯಲ್ಲಿ ಹಣ, ಹೆಸರು, ಅಂತಸ್ತು, ಅಧಿಕಾರಗಳಿದ್ದರೂ ಕೂಡಾ ಅವರು ಅಸ್ವಸ್ಥರಾಗಿರುವಂತೆ ಕಾಣುತ್ತಾರೆ. ಯುವಕರು ಪಟ್ಟಭದ್ರ ಶಕ್ತಿಗಳ ಕೈಯಲ್ಲಿರುವ ಸ್ಫೋಟಕ ಸಾಮಗ್ರಿಯಂತೆ ಬಳಕೆಯಾಗುತ್ತಿದ್ದಾರೆ. ತಮ್ಮ ತಮ್ಮ ದೇಶ, ನೆಲ, ಕುಲದ ಬಗ್ಗೆ ನಾವು ಜಾಣ ಕಿವುಡರಾಗಿದ್ದೇವೆ. ನಾವಿಂದು ವಿಷಯವನ್ನು ತಲೆಗೆ ತುಂಬಿಕೊಂಡು ಜ್ಞಾನಿ ಎಂಬಂತೆ ಮೆರೆಯುತ್ತಿದ್ದೇವೆ. ಆದರೆ ಅದನ್ನು ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ, ಸಾಮಾಜಿಕ ಪ್ರಜ್ಞೆಯಿಂದ ಉಪಯೋಗಿಸುತ್ತಿಲ್ಲ. ನಮ್ಮ ನಮ್ಮಲ್ಲೇ ಇರುವ ಬಡವರ, ನಿರ್ಗತಿಕರ, ದರಿದ್ರರ ಬದುಕನ್ನು ತಿರುಗಿ ನೋಡುವಷ್ಟೂ ತಾಳ್ಮೆ ಇಲ್ಲದವಾಗಿದ್ದೇವೆ. ಇಡೀ ಜಗತ್ತನ್ನು ಮನುಕುಲವನ್ನು ಹಠಾತ ಆಗಿ ಬದಲಾಯಿಸಲು ಸಾಧ್ಯವಿಲ್ಲ ಎಂಬುದು ನಗ್ನ ಸತ್ಯ. ಆದರೆ ಇದ್ದಲ್ಲೇ, ತನ್ನ ಮಿತಿಯಲ್ಲೇ ಹಾಸಿಗೆ ಚಾಚಿಕೊಂಡು, ತಾನೂ ಬದುಕಿ, ಉಳಿದವರಿಗೂ ಬದುಕುವ ಅವಕಾಶ ಕೊಡುವ ಸಮಚಿತ್ತದ ಬದುಕನ್ನು ಬಾಳಲು ನಾವು ಪ್ರಯತ್ನಿಸಬೇಕಾಗಿದೆ.
ಮಡಿಕೆ ಮಾಡುವ ವೃತ್ತಿಯನ್ನು ಬದುಕಿನ ಭಾಗವನ್ನಾಗಿ ಸ್ವೀಕರಿಸಿಕೊಂಡಿರುವ ಕುಂಬಾರರು ಬೇರೆ ಬೇರೆ ಹೆಸರಿನಿಂದ ಜಗತ್ತಿನಾದ್ಯಂತ ಬದುಕುತ್ತಿದ್ದಾರೆ. ಪ್ರಜಾಪತಿ, ಕುಂಭಕಾರ, ಕುಶವನ್, ಪಂಡಿತ್, ಕುಂಬಾರ, ಕುಲಾಲ, ಗುನಗ, ಹಾಂಡ, ಮೂಲ್ಯ, ಕುಂಬಾರಸೆಟ್ಟಿ, ಚಕ್ರಸಾಲಿ ಅಲ್ಲದೆ ಭಾಷೆ ಆಧರಿತ ತುಳು, ಕನ್ನಡ, ತೆಲುಗು ಕುಂಬಾರರು,, ಮಾಂಸಾಹಾರಿ ಹಾಗೂ ಸಸ್ಯಾಹಾರಿ ಕುಂಬಾರರು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ,, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ ,ಪ್ರಾದೇಶಿಕ ನೆಲೆಯ ಕುಂಬಾರರು ಎಂಬ ಪ್ರಬೇಧಗಳಿದ್ದರೂ ಕೂಡಾ, ಇತ್ತೀಚಿನ ದಿನಗಳಲ್ಲಿ ಕುಂಬಾರರು ನಾವು ಎಲ್ಲರೂ ಒಂದೇ ಎಂಬ ಗುರಿಯತ್ತ ಹೊರಟಿರುವುದು ಸ್ವಾಗತಕಾರಿ ಬೆಳವಣಿಗೆ. ಧನ ಕನಕ, ಜಮೀನುಗಳನ್ನು ಬಂಡವಾಳವನ್ನಾಗಿಸಿ ವೃತ್ತಿ ಮಾಡುವುದು ಜಗತ್ತಿನಲ್ಲಿ ಸಾಮಾನ್ಯ. ಆದರೆ ಪಂಚಭೂತಗಳಾದ ಗಾಳಿ, ನೀರು, ಮಣ್ಣು, ಬೆಂಕಿ ಹಾಗೂ ಆಕಾಶಗಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ವೃತ್ತಿ ಮಾಡುವ ಕುಂಬಾರರ ಬದುಕು ಅನ್ಯರಿಗಿಂತ ಒಂದು ಹೆಜ್ಜೆ ಮುಂದೆ ನಿಲ್ಲುವಂತೆ ಮಾಡಿದೆ. ಕುಂಬಾರರಿಗೆ ಸರ್ವಜ್ಞನಂತಹ, ಭಕ್ತ ಕುಂಬಾರನಂತಹ ಮಹಾನ್ ಚಿಂತಕರ ಬೆಂಗಾವಲಿದೆ. ಕುರುಬರಿಗೆ ಕನಕ, ಬಿಲ್ಲವರಿಗೆ ನಾರಾಯಣ ಗುರು, ಬೇಡರಿಗೆ ವಾಲ್ಮೀಕಿ, ಬೆಸ್ತರಿಗೆ ವೇದವ್ಯಾಸರ ಬೆಂಗಾವಲು ಸಿಕ್ಕಿದಂತೆ, ತಡವಾಗಿಯಾದರೂ ಕುಂಬಾರರಿಗೆ ಸರ್ವಜ್ಞರ ಜ್ಞಾನದ ಬೆಳಕು ದೊರೆತಿದೆ. ಈ ಬಗ್ಗೆ ಹೋರಾಟ ಮಾಡಿದ ಕುಂಬಾರ ಸಂಘಟನೆಗಳ ಬಲ ಮತ್ತಷ್ಟು ಕ್ರೋಡೀಕೃತಗೊಳ್ಳಬೇಕಾಗಿದೆ. ಸಂಘಟನೆಗಳು ನಾಲ್ಕು ದಿಕ್ಕುಗಳಲ್ಲೂ ಬೆಳೆಯಬೇಕಾಗಿದೆ. ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ ನೇತಾರರು ಮುಂದಕ್ಕೆ ಬರಬೇಕಾಗಿದೆ.  ಇವೆಲ್ಲಕ್ಕೂ ದಾರಿಯಾಗಬಲ್ಲ, ಧ್ವನಿಯಾಗಬಲ್ಲ ಮಾಧ್ಯಮ ಹಾಗೂ ಪತ್ರಿಕಾ ಮಾರ್ಗದರ್ಶನವೂ ನಮಗೆ ಅನಿವಾರ್ಯವಾಗುತ್ತಿದೆ.
ಸುಮಾರು ಎರಡು ದಶಕಗಳ ಹಿಂದೆ ಆರಂಭವಾದ ಮುಂಬೈ ಕುಲಾಲ ಸಂಘದ ಅಮೂಲ್ಯ ಪತ್ರಿಕೆ, ಮೈಸೂರಿನ ಕುಂಭಮಿತ್ರ, ಬೆಂಗಳೂರಿನ ಕುಂಭೋದಯ, ಇತ್ತೀಚೆಗೆ ಆರಂಭವಾದ ಉ.ಕ ದ ಕರುನಾಡ ಕುಂಬಾರ ಪತ್ರಿಕೆಗಳು ಸಾಕಷ್ಟು ಸೇವೆ ಸಲ್ಲಿಸಿವೆ, ಸಲ್ಲಿಸಲು ಸಜ್ಜಾಗಿವೆ. ನೂರಾರು ಹಿರಿಯ ಬರಹಗಾರರು , ಚಿಂತಕರು, ಸಾಹಿತಿಗಳು ಆಕಾಶವಾಣಿ, ದೂರದರ್ಶನಗಳಲ್ಲಿ ದುಡಿಯುತ್ತಾ ನಮ್ಮ ಆಸುಪಾಸಿನಲ್ಲಿದ್ದಾರೆ. ಕೆಲವರು ಪರಿಚಿತರಾಗಿದ್ದರೆ, ಇನ್ನೂ ಹಲವರು ಅಪರಿಚಿತರಾಗಿಯೇ ಉಳಿದಿದ್ದಾರೆ. ದಿನಪತ್ರಿಕೆ, ಮಾಸ ಪತ್ರಿಕೆ, ವಾರ ಪತ್ರಿಕೆ, ಪಾಕ್ಷಿಕಗಳನ್ನು ಕೈಯಲ್ಲಿ ಹಿಡಿದು ಓದುವಂತೆಯೇ ಇಂದು ಸುದ್ದಿ ಸಮಾಚಾಗಳನ್ನು ಕಂಪ್ಯೂಟರ್, ಮೊಬೈಲ್, ಲ್ಯಾಪ್ಟಾಪ್ಗಳಲ್ಲೂ ಓದುವಂತಾಗಿರುವುದು ತಂತ್ರಜ್ಞಾನದ ಬೇಳವಣಿಗೆಯ ಮಟ್ಟವನ್ನು ಸೂಚಿಸುತ್ತದೆ. ಫೇಸ್ಬುಕ್, ವಾಟ್ಸಾಪ್ ಗಳಂತಹ ಸಾಮಾಜಿಕ ತಾಣಗಳು ಇಂದು ಹೆಚ್ಚು ಹೆಚ್ಚು ಪರಿಣಾಮಕಾರಿಯಾಗಿ ಯುವಕರನ್ನು ಸೆಳೆಯುವ ಈ ಕಾಲಘಟ್ಟದಲ್ಲಿ ಕುಲಾಲ/ಕುಂಬಾರ ಸಮುದಾಯದ ಆಗು-ಹೋಗು, ನೋವು-ನಲಿವು, ಸಾಧಕ-ಬಾಧಕಗಳನ್ನು ಕ್ಷಿಪ್ರವಾಗಿ ಹಂಚಿಕೊಳ್ಳಲು ಈ ಸಾಮಾಜಿಕ ತಾಣಗಳು ಹೆಚ್ಚು ಸೂಕ್ತವಾಗಿವೆ. ಕಳೆದ ಐದು ವರ್ಷಗಳಿಂದ `ಕುಲಾಲ್ ವರ್ಲ್ಡ್’ ಎಂಬ ಶಿರೋನಾಮೆಯೊಂದಿಗೆ ಸಮಾಜದ ಆಗು-ಹೋಗುಗಳನ್ನು ಭಾಷೆ, ನೀತಿ, ಗುಂಪು, ಪಂಗಡ, ಪಕ್ಷಗಳನ್ನು ಮೀರಿ ನಿಂತು, ಕುಂಬಾರರು/ಕುಲಾಲರು ಎಂಬ ಪ್ರೀತಿಯಿಂದ ರಾಜ್ಯ, ದೇಶ, ವಿದೇಶಗಳಲ್ಲಿಯ ಸಮಾಜ ಬಂಧುಗಳಿಗೆ ಹಂಚಿಕೊಂಡು ಬರುತ್ತಿರುವ ಸಾಮಾಜಿಕ ತಾಣವಿಂದು www.kulalworld.com ಎಂಬ ವೆಬ್ ಪೇಜ್ ಆಗಿರುವುದು ಸಂತಸವನ್ನು ತಂದಿದೆ.
ಹಿರಿಯರಾದ ಕುಂವೀ ಯವರು, ಪತ್ರಿಕಾಂಗವನ್ನು ಅರೆದು ಕುಡಿದಿರುವ ಚಿದಂಬರ ಬೈಕಂಪಾಡಿಯವರು, ವೃತ್ತಿರಂಗದಲ್ಲೇ ಮಿಂಚುತ್ತಿರುವ ನೂರಾರು ಕುಂಬಾರ ಪತ್ರಕರ್ತರು, ಹವ್ಯಾಸಿ ಬರಹಗಾರರ ಒಂದು ಸ್ಪಷ್ಟ-ದಿಟ್ಟ ತಂಡವನ್ನು ಕಟ್ಟಿಕೊಂಡು ಉತ್ಸಾಹದಿಂದ ಹೊರಟಿರುವ ದಿನೇಶ್ ಬಂಗೇರ ಇರ್ವತ್ತೂರು ಇವರಿಗೆ ಶಹಭಾಸ್ ಹೇಳಿ, ಅವರ ಬೆನ್ನು ತಟ್ಟಬೇಕಾದುದು ನಮ್ಮ ಜವಾಬ್ದಾರಿ. ಇದೀಗ ಬೇರೆ ವೃತ್ತಿಯಲ್ಲಿದ್ದರೂ ಮಂಗಳೂರಿನ `ಪಟ್ಟಾಂಗ ಪತ್ರಿಕೆ’ `ಕರಾವಳಿ ಅಲೆ’ ಮುಂತಾದ ಪತ್ರಿಕೆಗಳಲ್ಲಿ ದಿಟ್ಟ-ಜನಪರ ಬರಹಗಳಿಂದ ಹೆಸರಾಗಿದ್ದ ಇರ್ವತ್ತೂರು ಪತ್ರಿಕೋದ್ಯಮದಲ್ಲಿ ಪಳಗಿದ ಜೀವ. ಅವ ಜೊತೆಗಿರುವ ಅನುಭವ, ಉತ್ಸಾಹ. ಸಂತುಲಿತ ತಂಡವನ್ನು ಕಂಡಾಗ ಕಾಲೇಜು ದಿನಗಳಲ್ಲಿ ಹವ್ಯಾಸಿ ಪತ್ರಿಕೋದ್ಯಮದಲ್ಲಿದ್ದು, `ಮುಂಗಾರು’ ಪತ್ರಿಕೆಯ ವಡ್ಡರ್ಸೆ ರಘುರಾಮ ಶೆಟ್ಟರ ಪ್ರಭಾವದಿಂದ ಬರಹಕ್ಕೆ, ಶಿವರಾಮ ಕಾರಂತರ ಪ್ರಭಾವಕ್ಕೆ ನೇರ ನಿಷ್ಠುರದ ಸಾಹಿತ್ಯ ಸೇವೆಗೆ ನಿಂತಂತಹ ನನಗೆ ತುಂಬಾ ಖುಷಿಯಾಯಿತು. ನಾವು ಮಾಡಲಾಗದ್ದನ್ನು ನಮ್ಮ ಸಮುದಾಯದ ಯುವಕರ ಗುಂಪೊಂದು ಮಾಡುತ್ತಿದೆ. ನಮ್ಮ ಕನಸ್ಸನ್ನು ನಮ್ಮವರೇ ನನಸು ಮಾಡುತ್ತಿದ್ದಾರೆ. ಅದನ್ನು ಜಾರದಂತೆ, ಸೋರದಂತೆ, ಬೀಳದಂತೆ, ಸೊರಗದಂತೆ, ಮುಟ್ಟಿ, ತಟ್ಟಿ, ಹರಸಿ ಹಾರೈಸಿ  ಬೆಂಗಾವಲಾಗಿ ನಿಲ್ಲಬೇಕಾದುದು ನಮ್ಮೆಲ್ಲರ ಬದುಕಿನ ಭಾಗ ಹಾಗೂ ಸಮಾಜಕ್ಕೆ ಕೊಡಬಹುದಾದ ಕೊಡುಗೆ ಎಂಬುದು ನನ್ನ ಅಂಬೋಣ.
ಡಾ. ಎಂ ಅಣ್ಣಯ್ಯ ಕುಲಾಲ್, ಉಳ್ತೂರು