About kulal


ನಾಗರಿಕತೆ ಬೆಳೆದಂತೆ ಮಾನವ ಒಂದೆಡೆ ನೆಲೆ ನಿಲ್ಲುವುದನ್ನು ಕಲಿತ. ಗೆಡ್ಡೆ, ಗೆಣಸು ತಿನ್ನುತ್ತಿದ್ದವನು ಆಹಾರವನ್ನು ಬೇಯಿಸಿ ತಿನ್ನಲು ಶುರು ಮಾಡಿದ. ಆದರೆ, ಆಹಾರ ಪದಾರ್ಥಗಳನ್ನು ಬೇಯಿಸಲು ಏನಾದರೂ ಬೇಕಲ್ಲ. ಆಗ ಬೆಳಕಿಗೆ ಬಂದಿದ್ದು ಜೇಡಿ ಮಣ್ಣಿನಿಂದ ಮಾಡಿದ ಮಡಕೆಗಳು. ಈ ಮಡಕೆಗಳು ಮುಂದೆ ಜನ ಜೀವನದ ಅವಿಭಾಜ್ಯ ಅಂಗವಾಯಿತು. ಅಷ್ಟೇ ಅಲ್ಲ, ನಾಗರಿಕತೆಯ ಬೆಳವಣಿಗೆಯಲ್ಲೂ ಕುಂಬಾರಿಕೆ ಪ್ರಮುಖ ಪಾತ್ರ ವಹಿಸಿತು. ಕುಂಬಾರಿಕೆಯನ್ನು ವೃತ್ತಿ ಮಾಡಿಕೊಂಡವರು ಕುಂಬಾರರಾದರು. ಅವರೊಂದು ಸಮುದಾಯವಾಗಿಯೂ ಬೆಳೆದರು.
ಕುಂಬಾರ ಸಮುದಾಯದ ಹುಟ್ಟಿನ ಬಗ್ಗೆ ಹಲವಾರು ಪುರಾಣ ಕಥೆಗಳಿವೆ. ಮಹಾಭಾರತದ ಪ್ರಕಾರ ದ್ರೌಪದಿ ಸ್ವಯಂವರ ಕಾಲದಲ್ಲಿ ಪಾಂಡವರು ಕುಂಬಾರನ ಕೊಟ್ಟಿಗೆಯಲ್ಲಿ ವಾಸವಿದ್ದರಂತೆ. ಮತ್ತೊಂದು ಕಥೆಯಂತೆ ಯಾಗ, ಯಜ್ಞ ಮಾಡುವ ಸಂದರ್ಭದಲ್ಲಿ ಬೇಕಾದ ಗಡಿಗೆಗಳನ್ನು ಋಷಿ ಮುನಿಗಳು ತಾವೇ ತಯಾರು ಮಾಡಿಕೊಳ್ಳುತ್ತಿದ್ದರಂತೆ. ಕೊನೆಗೆ ಈ ಕೆಲಸಕ್ಕಾಗಿ ಕುಂಬಾರರನ್ನು ಬ್ರಹ್ಮದೇವ ಸೃಷ್ಟಿ ಮಾಡಿದನಂತೆ. ಕುಂಬಾರರು ಬ್ರಹ್ಮನ ಮಗನ ಮೂಲದವರು ಎನ್ನುತ್ತಾರೆ . ಏಕೆಂದರೆ ತಾನೂ ಸಹ ತಂದೆಯಂತೆ ಸೃಷ್ಟಿಕರ್ತ ಆಗಬೇಕು ಎಂದು ಮಗ ಬಯಸಿದಾಗ ಬ್ರಹ್ಮ ಆತನನ್ನು ಕುಂಬಾರನನ್ನಾಗಿ ಮಾಡಿದನಂತೆ.
ಕರಕುಶಲದಲ್ಲಿ ಎತ್ತಿದ ಕೈ : ಪುರಾಣ ಕಥೆಗಳೇನೇ ಇದ್ದರೂ ಕರಕುಶಲದಲ್ಲಿ ಕುಂಬಾರರು ಎತ್ತಿದ ಕೈ ಎಂಬುದರಲ್ಲಿ ಎರಡನೇ ಮಾತೇ ಇಲ್ಲ. ಸ್ಟೀಲ್ ಮತ್ತು ಅಲ್ಯುಮಿನಿಯಂ ಪಾತ್ರೆ ಪಡಗಗಳ ಪ್ರವೇಶ ಮಾಡುವವರೆಗೂ ಕುಂಬಾರಣ್ಣ ಮಾಡಿದ ಮಡಕೆ, ಕುಡಿಕೆಗಳೇ ಮನೆಗಳಲ್ಲಿ ತುಂಬಿರುತ್ತಿದ್ದವು. ಗ್ರಾಮೀಣ ಪ್ರದೇಶದಲ್ಲಿ ಹಲವೆಡೆ ಈಗಲೂ ಅವುಗಳನ್ನು ಕಾಣಬಹುದು. ಅದರಲ್ಲೂ ಬೇಸಿಗೆ ಸಂದರ್ಭದಲ್ಲಿ ನಗರ ಪ್ರದೇಶದಲ್ಲಿಯೂ ಮಡಕೆಯಲ್ಲಿಟ್ಟ ನೀರನ್ನು ಕುಡಿಯುವ ವಾಡಿಕೆ ಇದೆ. ಏಕೆಂದರೆ ಮಡಕೆಯಲ್ಲಿಡುವ ನೀರು ತಂಪಾಗಿರುತ್ತದೆ.
ಸಮುದಾಯದ ವಿಚಾರವಾಗಿ ಹೇಳುವುದಾದರೆ ಕುಂಬಾರರನ್ನು ಕರ್ನಾಟಕದಲ್ಲಿ ಪ್ರಾದೇಶಿಕವಾರು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಮತ್ತೊಂದು ಕರಾವಳಿ ಕುಂಬಾರರು ಎನ್ನುತ್ತಾರೆ. ಲಿಂಗಾಯತ ಕುಂಬಾರರ ಜನಸಂಖ್ಯೆ ಹೆಚ್ಚು. ಅವರು ಮಂಡ್ಯ, ಮೈಸೂರು, ಕೋಲಾರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಇದ್ದಾರೆ. ಇವರು ಶೈವ ಭಕ್ತರು ಮತ್ತು ಸಸ್ಯಾಹಾರಿಗಳು. ಇನ್ನೊಂದು ಪಂಗಡವೆಂದರೆ ಅದು ಸಜ್ಜನ ಕುಂಬಾರರು. ಇವರು ತುಮಕೂರು, ಬೆಂಗಳೂರು, ಕೋಲಾರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತುಳು ನಾಡಿನ ಕುಲಾಲರು ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು ಮತ್ತು ಕೇರಳದ ಕಾಸರಗೋಡು ಕಡೆ ಕಂಡು ಬರುತ್ತಾರೆ. ತುಳು ನಾಡಿನ ಕನ್ನಡ ಕುಂಬಾರರು ದಕ್ಷಿಣ ಕನ್ನಡದ ಬೆಳ್ತಂಗಡಿ, ಕಡಬ, ಉಪ್ಪಿನಂಗಡಿ, ಉಜಿರೆ, ಕಕ್ಕಿಂಜೆ, ಅರೆಕಾಲ, ಚಾರ್ಮಾಡಿಯಲ್ಲಿ ನೆಲೆಸಿದ್ದಾರೆ. ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದವರೆಗೆ ಗುನುಗ ಕುಂಬಾರರು ಇದ್ದಾರೆ. ಇವರಲ್ಲಿ ಕೆಲವರು ಶಾಖಾಹಾರಿಗಳು. ಇನ್ನೂ ಕೆಲವರು ಬ್ರಾಹ್ಮಣರಂತೆ ಜನಿವಾರ ಧರಿಸುತ್ತಾರೆ. ಕೊಡಗು ಜಿಲ್ಲೆಯಲ್ಲೂ ಕುಂಬಾರರು ಇದ್ದಾರೆ. ಇನ್ನು ತೆಲುಗು ಕುಂಬಾರರು ಕೋಲಾರ, ಗುಲ್ಬರ್ಗ, ಬೀದರ್, ರಾಯಚೂರು, ಬಳ್ಳಾರಿ, ಬೆಂಗಳೂರು ನಗರ ಮತ್ತಿತರ ಕಡೆಗಳಲ್ಲಿ ನೆಲೆ ನಿಂತಿದ್ದಾರೆ.
ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದು ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವವರು ತಮಿಳು ಕುಂಬಾರರು. ಮಹಾರಾಷ್ಟ್ರದಿಂದ ಬಂದವರು ಲಾಡ ಮತ್ತು ಗುಜರಾತಿನಿಂದ ಬಂದು ಬೀದರ್ ಮತ್ತಿತರ ಕಡೆ ಇರುವವರು ಗೊಂಬಿ ಕುಂಬಾರರು. ಉತ್ತರ ಭಾರತದ ಅನೇಕ ಕಡೆ ಇರುವ ಸಮುದಾಯದ ಜನರನ್ನು ಪ್ರಜಾಪತಿ ಎಂದು ಕರೆಯಲಾಗುತ್ತದೆ. ಇವರಲ್ಲದೆ ಬಯಲು ಕುಂಬಾರರು, ರೆಡ್ಡಿ ಕುಂಬಾರರು ಮತ್ತು ಕ್ಷತ್ರಿಯ ಕುಂಬಾರರೂ ಕರ್ನಾಟಕದಲ್ಲಿ ಇದ್ದಾರೆ. ತಮ್ಮ ಹೆಸರಿನ ಜೊತೆಗೆ ‘ಸೆಟ್ಟಿ’ ಎನ್ನುವ ಹೆಸರನ್ನು ದಕ್ಷಿಣ ಕರ್ನಾಟಕದಲ್ಲಿ ಕುಂಬಾರರು ಸೇರಿಸಿಕೊಳ್ಳುತ್ತಾರೆ. ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಹದಿನಾರು ಹೊರಬಾಂಧವ್ಯದ ಬಳ್ಳಿಗಳಿವೆ – ಕಸ್ತೂರಿ, ಸಂಪಿಗೆ, ನಾಗರ, ಕಮಲ, ರಾವಲ, ಇತ್ಯಾದಿ. ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ಹಾಗೂ ಬಳ್ಳಿಗಳ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿ ಇದೆ. ಇವರಲ್ಲಿ ರಕ್ತ ಸಂಬಂಧಿಕರ ಹಾಗೂ ಸೋದರಿ ಸಂಬಂಧದ ಮದುವೆಗಳಿಗೆ ಅವಕಾಶವಿದೆ. ವಿವಾಹ ವಿಚ್ಛೇದಿತರಿಗೆ ಹಾಗೂ ವಿಧುರ, ವಿಧವೆಯರ ವಿವಾಹಕ್ಕೆ ಅವಕಾಶವಿದೆ. ಕುಂಬಾರರು ಗಂಡು ಮಗುವನ್ನು ವಂಶೋದ್ಧಾರಕನೆಂದು ಭಾವಿಸುತ್ತಾರೆ. ಗರ್ಭಿಣಿಗೆ ಏಳನೆಯ ಅಥವಾ ಎಂಟನೆಯ ತಿಂಗಳಲ್ಲಿ ಹೆರಿಗೆಯ ಮುಂಚಿನ ಧಾರ್ಮಿಕ ಕಾರ್ಯವು ನಡೆಯುತ್ತದೆ. ಜನನ ಸೂತಕವು ಹತ್ತು ದಿನಗಳವರೆಗೆ ಇರುತ್ತದೆ. ಹನ್ನೊಂದನೇ ದಿನ ನಾಮಕರಣ ಶಾಸ್ತ್ರವನ್ನು ಮಾಡುತ್ತಾರೆ. ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರಿಗೂ ಮುಂಡನ ಕಾರ್ಯವನ್ನು ಮಾಡಿಸುತ್ತಾರೆ. ಋತುಮತಿಯಾದ ಹೆಣ್ಣು ಮಕ್ಕಳಿಗೆ ‘ಸೀರೆ ಉಡುವುದು’ ಎಂಬ ಕ್ರಿಯಾವಿಧಿ ಆಚರಿಸುತ್ತಾರೆ. ಮುಖ್ಯ ಮದುವೆಯ ಆಚರಣೆಗಳೆಂದರೆ, ಹರಿವಾಣತರುವುದು, ಬಾಸಿಂಗ ಕಟ್ಟುವುದು, ಕಂಕಣ ಆರತಿ ಮಾಡುವುದು, ಧಾರೆ, ತಾಳಿಕಟ್ಟುವುದು, ಇತ್ಯಾದಿ. ಶವವನ್ನು ಹೂಳಿ, ಸಾವಿನ ಸೂತಕವನ್ನು ಹತ್ತು ದಿನಗಳವರೆಗೆ ಆಚರಿಸುತ್ತಾರೆ. ತಿಥಿ ಎಂಬ ಧಾರ್ಮಿಕ ಶಾಸ್ತ್ರವನ್ನು ಹನ್ನೊಂದನೇ ದಿನ ಮಾಡುತ್ತಾರೆ.
ಇವರಲ್ಲಿ ಕೆಲವರು ಇತ್ತೀಚೆಗೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಯಲ್ಲಿದ್ದಾರೆ. ಕೆಲವರು ಇಟ್ಟಗೆ ತಯಾರಿಸುವ ಹಾಗೂ ಹೆಂಚಿನ ಕಾರ್ಖಾನೆಗಳನ್ನು ನಡೆಸುತ್ತಿದ್ದಾರೆ. ಈ ಜನರು ಜಿಲ್ಲೆ ಹಾಗೂ ರಾಜ್ಯದ ಮಟ್ಟಗಳಲ್ಲಿ ತಮ್ಮ ಸಂಘಟನೆಗಳನ್ನು ಹೊಂದಿದ್ದಾರೆ. ಅವುಗಳು ಸಮುದಾಯದ ಸಾಮಾಜಿಕ, ಆರ್ಥಿಕ, ರಾಜಕೀಯ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ.
ಕುಂಬಾರೇಶ್ವರ ಇವರ ಸಮುದಾಯದ ದೇವರು, ಮುತ್ಯಾಲಮ್ಮ ಇವರ ಮುಖ್ಯ ಸ್ತ್ರೀ ದೇವತೆ. ಇವರ ಸಮುದಾಯದ ಹಬ್ಬವಾದ ಕುಂಭಾಭಿಷೇಕವನ್ನು ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಮಾಡುತ್ತಾರೆ. ಇವರು ಸಾಂಪ್ರದಾಯಿಕವಾಗಿ ಇತರೆ ಜನಸಮುದಾಯಗಳಿಗೆ ಅವಶ್ಯಕವಾದ ಮಣ್ಣಿನ ಮಡಿಕೆ ಕುಡಿಕೆಗಳನ್ನು ಒದಗಿಸುತ್ತಿದ್ದರು. ಮದುವೆಯಂಥ ಸಮಾರಂಭದಲ್ಲಿ ಹಾಗೂ ಗ್ರಾಮ ದೇವತೆಗಳ ಹಬ್ಬಗಳಲ್ಲಿ ಮಡಿಕೆ ಒದಗಿಸುವ ಪದ್ಧತಿ ‘ಜಾಜಮಾನಿ’ (ಆಯ)ರೀತಿಯಲ್ಲಿ ನಡೆಯುತ್ತಿತು. ಆದರೆ ಈಗ ಇವರ ಸಾಂಪ್ರದಾಯಿಕ ವೃತ್ತಿ ಹಣದ ರೂಪದಲ್ಲಿ ಇರುತ್ತದೆ. ಈ ಸಮುದಾಯದಲ್ಲಿ ವ್ಯಾಪಾರಿಗಳು, ಆಡಳಿತಗಾರರು, ರಾಜಕಾರಣಿಗಳು ಇದ್ದಾರೆ. ಇವರು ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಕುಲಾಲರು :
ಕುಲಾಲರನ್ನು ‘ಮೂಲ್ಯ’ ಎಂದು ಕರೆಯುತ್ತಾರೆ. ಇವರು ದಕ್ಷಿಣ ಕನ್ನಡ- ಉಡುಪಿ-ಕಾಸರಗೋಡು ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಕನ್ನಡ ಮತ್ತು ತುಳು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಮಾತೃಮೂಲದ ಹೊರಬಾಂಧವ್ಯದ ಬೆಡಗುಗಳಿವೆ – ಬಂಗೇರ, ಸಾಲಿಯಾನ್ , ಬಂಜನ್ ಅಥವಾ ಬೆಂಜೆನ, ಉಪ್ಪೆನ್  ಇತ್ಯಾದಿ ಇವರ ಮನೆತನದ ಹೆಸರುಗಳು. ಸೋದರ ಸಂಬಂಧಿ ವಿವಾಹಗಳಿಗೆ ಅವಕಾಶವಿದೆ. ಇತ್ತೀಚಿಗೆ ಇವರ ವಂಶಪಾರಂಪರ್ಯವು ಗಂಡು ಮಕ್ಕಳತ್ತ ವಾಲುತ್ತಿದೆ. ಹೆಂಗಸರು ಮನೆಯ ಆರ್ತಿ, ಸಾಮಾಜಿಕ ಹಾಗೂ ಧಾರ್ಮಿಕ ಆಚರಣೆಯಾದ ‘ಬಯಕೆ’ ಕಾರ್ಯವನ್ನು ಬಸುರಿಯ ಏಳನೇ ತಿಂಗಳಲ್ಲಿ ಮಾಡುತ್ತಾರೆ. ಜನನ ಸೂತಕವನ್ನು ಹದಿನಾರು ದಿನ ಆಚರಿಸಿ, ನಂತರ ನಾಮಕರಣವನ್ನು ಮಾಡುತ್ತಾರೆ. ಶವವನ್ನು ಸುಟ್ಟು ಬೂದಿಯನ್ನು ನೀರಿನಲ್ಲಿ ಬಿಡುತ್ತಾರೆ. ಸಾವಿನ ಸೂತಕವು ಹನ್ನೆರಡು ದಿನಗಳವರೆಗೆ ಇರುತ್ತದೆ, ‘ಬೊಜ್ಜ’ ಎಂಬ ತಿಥಿ ಕಾರ್ಯವನ್ನು ಮಾಡುತ್ತಾರೆ.
ಕುಲಾಲರ ಪ್ರಮುಖ ವೃತ್ತಿಗಳು ಎಂದರೆ ವ್ಯವಸಾಯ, ಕೂಲಿ ಕೆಲಸ, ಬೀಡಿ ಸುತ್ತುವುದು ಇತ್ಯಾದಿ. ಸಾಂಪ್ರದಾಯಿಕವಾದ ಜಾತಿಯ ಸಂಘಟನೆ ಇದರಲ್ಲಿದೆ. ಅದು ಒಳಜಗಳಗಳನ್ನು ಬಗೆಹರಿಸುತ್ತದೆ. ತಪ್ಪಿತಸ್ಥರಿಗೆ ದಂಡ ವಿಧಿಸುತ್ತದೆ. “ದಕ್ಷಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ” ಇವರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಕುಲಾಲರು ಶಿವ, ಪಾರ್ವತಿ, ಗಣೇಶ, ವಿಷ್ಣು, ವೆಂಕಟರಮಣ ಮತ್ತು ಲಕ್ಷ್ಮಿ ಇತ್ಯಾದಿ ದೇವರುಗಳನ್ನು ಪೂಜಿಸಿ, ಕೆಲವು ಭೂತಗಳನ್ನು ಆರಾಧಿಸುತ್ತಾರೆ. ಇತ್ತೀಚಿಗೆ ಬ್ರಾಹ್ಮಣ ಪುರೋಹಿತರು ಮದುವೆಗಳನ್ನು ನಡೆಸಿಕೊಡುತ್ತಾರೆ. ಉಗಾದಿ, ದೀಪಾವಳಿ, ಸಂಕ್ರಾಂತಿ, ಗಣೇಶಚತುರ್ಥಿ ಮತ್ತಿತರ ಹಬ್ಬಗಳನ್ನು ಆಚರಿಸುತ್ತಾರೆ. ಭೂತಾರಾಧನೆಯ ಹಬ್ಬಗಳಾದ ಗೊಲಿಗಾಸುಡಿ, ಪಂಜುರ್ಲಿ ಹಾಗೂ ಹಾಲ್ಗುಡಿ ಇತ್ಯಾದಿ ಹಬ್ಬಗಳಲ್ಲಿ ಆಚರಿಸುತ್ತಾರೆ. ಈ ಸಮುದಾಯದಲ್ಲಿ ಕೆಲವರು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸಗಳಲ್ಲಿರುವವರು ಹಾಗೂ ರಾಜಕಾರಣಿಗಳು ಇದ್ದಾರೆ. ಆಧುನಿಕ ವಿದ್ಯಾಭ್ಯಾಸಕ್ಕೆ ಹುಡುಗರಿಗೆ ಪ್ರೋತ್ಸಾಹವಿದ್ದರೂ, ಹುಡುಗಿಯರಿಗೆ ಹೆಚ್ಚು ಪ್ರೋತ್ಸಾಹವಿಲ್ಲ. ಆಧುನಿಕ ಹಾಗೂ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳೆರಡರ ಬಗ್ಗೆ ಒಲವಿದೆ. ಸರಕಾರದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಇಲಾಖೆಯಿಂದ ಆರ್ಥಿಕ ಸಹಾಯಧನ ಪಡೆದು ಕೆಲವರು ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ. ಆಧುನಿಕ ಸಾಮಾಜಿಕ ಸಂಸ್ಥೆಗಳ ಉಪಯೋಗವನ್ನು ಪಡೆದುಕೊಳ್ಳಬೇಕಾಗಿದೆ.
ಆಚಾರ ವಿಚಾರಗಳಲ್ಲಿ ಪ್ರತ್ಯೇಕತೆ : ವಿಶೇಷ ಎಂದರೆ ಒಂದೊಂದು ಪಂಗಡಕ್ಕೆ ಒಂದೊಂದು ಹೆಸರು ಇರುವಂತೆ ಆಚಾರ ವಿಚಾರಗಳಲ್ಲಿಯೂ ಪ್ರತ್ಯೇಕತೆ ಇದೆ. ಆಯಾ ಪ್ರದೇಶದ ಸಂಸ್ಕೃತಿಗೆ ಅನುಗುಣವಾಗಿ ನಡೆದುಕೊಳ್ಳುವವರು ಈ ಸಮುದಾಯದ ಜನ.  ಲಿಂಗಾಯತ ಕುಂಬಾರರು ಈಶ್ವರ, ಬಸವಣ್ಣ ಮತ್ತು ವೀರಭದ್ರ ದೇವರುಗಳನ್ನು ಆರಾಧಿಸುತ್ತಾರೆ. ಮೈಲಾರ ಲಿಂಗ, ಸವದತ್ತಿ ಯಲ್ಲಮ್ಮ, ಬನಶಂಕರಿ ಮತ್ತಿತರ ದೇವರುಗಳನ್ನೂ ಪೂಜಿಸುತ್ತಾರೆ. ಹೆಚ್ಚಾಗಿ ಇವರು ಶ್ರೀಶೈಲ ಪೀಠಕ್ಕೆ ನಡೆದುಕೊಳ್ಳುತ್ತಾರಂತೆ. ಸಜ್ಜನ ಕುಂಬಾರರೂ ಮೊದಲು ಲಿಂಗಾಯತರೇ ಆಗಿದ್ದರಂತೆ. ಅವರಲ್ಲಿ ಒಬ್ಬ ಮಹಾ ಮಾಂತ್ರಿಕನಿದ್ದನಂತೆ. ಆತ ಲಿಂಗಾಯತರ ಆಚರಣೆಗಳನ್ನು ಧಿಕ್ಕರಿಸಿ ಮಾಂಸಹಾರಿಯಾಗಿದ್ದರಿಂದ ಕುಲದಿಂದ ಹೊರಗೆ ಹಾಕಿದರು. ಅದರಿಂದ ಕುಪಿತಗೊಂಡ ಮಾಂತ್ರಿಕ ಪ್ಲೇಗು ಹರಡುವಂತೆ ಮಾಡಿ ಲಿಂಗಾಯತರೂ ಮದ್ಯ, ಮಾಂಸ ಸೇವನೆ ಮಾಡುವವರೆಗೆ ಕಾಡಿದನಂತೆ. ಹೀಗೆ ಶಾಖಾಹಾರಿಗಳಾದವರು ಸಜ್ಜನ ಕುಂಬಾರರಾದರು. ಆತನಿಂದ ತಪ್ಪಿಸಿಕೊಂಡು ಹೋದವರು ಲಿಂಗಾಯತ ಕುಂಬಾರರಾಗಿ ಉಳಿದುಕೊಂಡರು ಎಂದು ಇತಿಹಾಸ ವಿವರಿಸುತ್ತದೆ.  ತುಳುನಾಡಿನ ಕುಲಾಲರು ನಾಗಾರಾಧನೆ ಮತ್ತು ಬರಿ ಪದ್ಧತಿ ಅನುಸರಿಸುತ್ತಾರೆ. ಭೂತಾರಾಧಾನೆಯೂ ಇವರಲ್ಲಿ ಕಂಡು ಬರುತ್ತದೆ.
ಸಹಾಯ, ಸವಲತ್ತು ಸಿಗುತ್ತಿಲ್ಲ: ಜನಸಂಖ್ಯೆ ಸುಮಾರು 22 ಲಕ್ಷದಷ್ಟಿದ್ದರೂ ಕುಂಬಾರರಿಗೆ ಸರ್ಕಾರದಿಂದ ಸಹಾಯ ಮತ್ತು ಸವಲತ್ತು ಸಮರ್ಪಕವಾಗಿ ಸಿಗುತ್ತಿಲ್ಲ. ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕೀಯ ಪ್ರಾತಿನಿಧ್ಯವೂ ಅಷ್ಟಕ್ಕಷ್ಟೇ ಎಂಬಂತೆ ಇದೆ. ಲಕ್ಷ್ಮೀಸಾಗರ್ ಅವರು ಶಾಸಕರಾಗಿ ಮಂತ್ರಿಗಳಾಗಿದ್ದನ್ನು ಹೊರತು ಪಡಿಸಿದರೆ ಬೇರೆ ಯಾರೂ ಆ ಮಟ್ಟಕ್ಕೆ ಹೋಗಿಲ್ಲ. ಕುಂಬಾರರ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಈಡೇರದೇ ಉಳಿದಿದೆ. ಪ್ರಸ್ತುತ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಡಿ ಒಂದು ನಿಗಮ ಇದೆಯಾದರೂ ಪ್ರತ್ಯೇಕವಾಗಿ ಬೇಕು ಎಂಬುದು ಸಮುದಾಯದವರ ಮನವಿ. ಬೇಡಿಕೆ ಈ ಹಿಂದೆ ಈಡೇರುವ ಸನ್ನಿವೇಶ ನಿರ್ಮಾಣವಾಗಿತ್ತಾದರೂ ಹಲವು ಕಾರಣಗಳಿಂದ ಅದು ಕನಸಾಗಿಯೇ ಉಳಿದಿದೆ.
ಶೈಕ್ಷಣಿಕ ವಿಚಾರದಲ್ಲಿ ಕುಂಬಾರ ಸಮುದಾಯದವರು ಪರವಾಗಿಲ್ಲ ಎನ್ನಬಹುದು. ಅದರಲ್ಲೂ ಕರಾವಳಿ ಮತ್ತು ಉಡುಪಿ ಭಾಗದಲ್ಲಿ ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ. ಆದರೆ, ಉತ್ತರ ಕರ್ನಾಟಕದ ಕಡೆ ಇನ್ನೂ ಮೂಲ ಕಸುಬು ಮುಂದುವರಿದಿರುವುದರಿಂದ ಅಲ್ಲಿ ಶೈಕ್ಷಣಿಕ ಮಟ್ಟ ಕೊಂಚ ಕಡಿಮೆ. ಸಾಮಾಜಿಕವಾಗಿಯೂ ಈ ಸಮಾಜ ಮುಂದುವರಿಯುತ್ತಿದೆ.
(kulalworld.com)