ನಾಟ್ಯರಂಗದಲ್ಲಿ ಮಿಂಚುತ್ತಿರುವ ಪ್ರತಿಭೆ ಸೌಂದರ್ಯ ಕುಲಾಲ್


ಮೂಡಬಿದ್ರೆ(ಮಾ.೨೯,ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಲೆ ಎಂಬುವುದು ಕೆಲವರಿಗೆ ದೈವದತ್ತವಾಗಿ ಬಂದರೆ ಇನ್ನು ಕೆಲವರಿಗೆ ಕಠಿಣ ಪರಿಶ್ರಮದ ಫಲವಾಗಿ ಒಲಿದು ಬರುವುದು. ತನಗಿರುವ ಆಸಕ್ತಿಗೆ ಪೂರಕವಾಗಿ ನಿರಂತರ ಅಭ್ಯಾಸದಿಂದ ಪ್ರೇಕ್ಷಕರ ಮನ ಮುದಗೊಳಿಸುವುದು ನಿಜವಾದ ಕಲಾವಿದನ ಕಲಾ ಚಾತುರ್ಯಕ್ಕೆ ಹಿಡಿದ ಕೈಗನ್ನಡಿ. ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಅತಿ ಪ್ರಾಚೀನ ಎನ್ನಲಾದ ಭರತನಾಟ್ಯದಲ್ಲಿ ಬಾಲ್ಯದಿಂದಲೇ ತೊಡಗಿಸಿಕೊಂಡು ಹಲವಾರು ವೇದಿಕೆಗಳಲ್ಲಿ ಕಾಲಿಗೆ ಗೆಜ್ಜೆಕಟ್ಟಿ ನೃತ್ಯಕ್ಕೆ ಮೆರುಗನ್ನು ತಂದು ಜನಮೆಚ್ಚುಗೆ ಗಳಿಸಿದವರು ಸೌಂದರ್ಯ ಕುಲಾಲ್.

cover
ಮೂಲತಃ ಮಾನಗಳೂರಿನವರಾಗಿದ್ದು ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನೆಲೆಸಿರುವ ನಾಗೇಶ್ ಡಿ. ಕುಲಾಲ್ ಮತ್ತು ಶಾಂತಲಾ ಎನ್ ಕುಲಾಲ್ ಇವರ ಸುಪುತ್ರಿಯಾಗಿರುವ ಸೌಂದರ್ಯ ಎಳವೆಯಲ್ಲೇ ನೃತ್ಯದಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಶಾಲಾ ವಾರ್ಷಿಕೋತ್ಸವದಲ್ಲಿ ಇವರ ನೃತ್ಯವನ್ನು ಕಂಡ ಶಿಕ್ಷಕರ ಪ್ರೋತ್ಸಾಹದ ಮಾತುಗಳಿಂದ ಪ್ರೇರಿತರಾಗಿ ನೃತ್ಯದಲ್ಲಿ ವಿಶೇಷವಾದ ಸಾಧನೆ ಮಾಡಬೇಕೆಂಬ ಕನಸು ಕಾಣುತ್ತಾರೆ. ಅದರಂತೆ ಸಾಗರದ `ಪರಿಣತಿ ಕಲಾಕೇಂದ್ರ’ದ ವಿದ್ವಾನ್ ಎಂ ಗೋಪಾಲ್ ಅವರ ಶಿಷ್ಯರಾಗಿ ನೃತ್ಯ ತರಗತಿಗೆ ಸೇರಿಕೊಂಡು ಭರತನಾಟ್ಯದ ಜೊತೆಗೆ ಜಾನಪದ ನೃತ್ಯಗಳಲ್ಲಿ ತರಬೇತಿ ಪಡೆದುಕೊಂಡರು.

PowerPoint Presentation

ಶಾಲಾ ಪ್ರತಿಭೋತ್ಸವದಲ್ಲಿ ಮನಸೆಳೆವ ನೃತ್ಯ ಪ್ರದರ್ಶನಗಳನ್ನು ನೀಡಿರುವ ಇವರು ಭರತನಾಟ್ಯದಲ್ಲಿ ನಿರಂತರ ಪ್ರಥಮ ಬಹುಮಾನ ಗಳಿಸಿದ್ದಾರೆ. ತಾಲೂಕು ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾವನ್ನೂ ಪಡೆದಿದ್ದಾರೆ. ನವದೆಹಲಿಯಲ್ಲಿ ಆಯೋಜಿಸಲ್ಪಟ್ಟ ಕರ್ನಾಟಕ ಸಂಘದ ಕಾರ್ಯಕ್ರಮದಲ್ಲೂ ತಮ್ಮ ಪ್ರತಿಭಾ ಪ್ರದರ್ಶನಗೈದಿರುವ ಸೌಂದರ್ಯ ಅವರು, ಕರ್ನಾಟಕದಾದ್ಯಂತ ಹಲವು ವೇದಿಕೆಗಳಲ್ಲಿ ನಿರಂತರ ನೃತ್ಯ ಪ್ರದರ್ಶನ ಮಾಡಿದ್ದಾರೆ. ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣದಲ್ಲೂ ನೃತ್ಯ ಪ್ರತಿಭೆಯನ್ನು ಅನಾವರಣಗೊಳಿಸಿ ನೋಡುಗರನ್ನು ರಂಜಿಸಿದ್ದಾರೆ.

soundarya4

ಭರತನಾಟ್ಯದ ಜೊತೆಗೆ ಪಂಜಾಬಿನ ಬಾಂಗ್ಡಾ ನೃತ್ಯ, ಗುಜರಾತಿನ ದಾಂಢಿಯಾ, ಟಿಪ್ನಿ, ರಾಜಾಸ್ಥಾನಿ ನೃತ್ಯ, ಆಂಧ್ರಪ್ರದೇಶದ ಬಂಜಾರ, ಲಾವಣಿ ಇನ್ನಿತರ ನೃತ್ಯಗಳನ್ನು ಕರಗತ ಮಾಡಿಕೊಂಡಿರುವ ಸೌಂದರ್ಯ ಲೀಲಾಜಾಲವಾಗಿ ಪ್ರದರ್ಶನ ನೀಡುತ್ತಾರೆ. 2015ನೇ ಇಸವಿಯಲ್ಲಿ ಸಾಗರದಲ್ಲಿ ನಡೆದ `ಅಂತಾರಾಷ್ಟ್ರೀಯ ನೃತ್ಯೋತ್ಸವ’ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಹತ್ತು ನೃತ್ಯಪಟುಗಳಲ್ಲಿ ಸೌಂದರ್ಯಾ ಒಬ್ಬರಾಗಿದ್ದು, ಪ್ರಮಾಣಪತ್ರವನ್ನು ಪಡೆದಿದ್ದಾರೆ. ಸಾಗರದ ಪರಿಣತಿ ಕೇಂದ್ರದ ವತಿಯಿಂದ ವರ್ಷ೦ಪ್ರತಿ ನೀಡುವ ಬೆಸ್ಟ್ ಡಾನ್ಸರ್ ಆಫ್ ದಿ ಈಯರ್’ ಎಂಬ ಪ್ರಶಸ್ತಿಯನ್ನು 2016ರಲ್ಲಿ ತನ್ನ ಮುಡಿಗೇರಿಸಿಕೊಂಡಿದ್ದಾರೆ.

soundarya8

ಪದವಿ ಶಿಕ್ಷಣಕ್ಕಾಗಿ ಮೂಡಬಿದ್ರೆ ಆಳ್ವಾಸ್ ಕಾಲೇಜಿಗೆ ಸೇರ್ಪಡೆಗೊಂಡ ಇವರ ನೃತ್ಯ ಸಾಧನೆಯನ್ನು ಗುರುತಿಸಿ ಉಚಿತ ವಿದ್ಯಾಭ್ಯಾಸದ ಅರ್ಹತೆಯನ್ನು ಪಡೆದಿರುವ ಸೌಂದರ್ಯ ಕುಲಾಲ್, ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಇವರಿಂದ ಭರತನಾಟ್ಯ, ಕೊಲ್ಕಾತ್ತಾದ ಆಶಿಂ ಬಂಧು ಭಟ್ಟಾಚಾರ್ಯ ಇವರಿಂದ ಕಥಕ್, ಅವನಿರಾಜ್ ಮತ್ತು ಮೇರಿ ಬನ್ನಿ ಅವರಿಂದ ಮೋಹಿನಿಯಾಟ್ಟಂ ತರಬೇತಿ ಪಡೆದಿದ್ದಾರೆ.

soundarya1

ಮಂಗಳೂರು ವಿಶ್ವ ವಿದ್ಯಾಲಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಜಾನಪದ ವಿಭಾಗದಲ್ಲಿ ಆಳ್ವಾಸ್ ತಂಡವನ್ನು ಪ್ರತಿನಿಧಿಸಿರುವ ಸೌಂದರ್ಯಾ 2017 ಮತ್ತು 2018 ಹೀಗೆ ಎರಡು ಬಾರಿ ಪ್ರಥಮ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿರುವ ಅವರು, ಆಳ್ವಾಸ್ ಸಾಂಸ್ಕೃತಿಕ ತಂಡದ ಸದಸ್ಯೆಯಾಗಿ ರಾಜ್ಯಾದ್ಯಂತ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ. ತನ್ನ ಈ ಎಲ್ಲ ಸಾಧನೆಗಳ ಹಿಂದೆ ಪರಿಶ್ರಮ ಮಾತ್ರವಲ್ಲದೆ, ಅಪ್ಪ-ಅಮ್ಮ, ಶಿಕ್ಷಕರು, ಕುಟುಂಬದವರು ಹಾಗೂ ಸ್ನೇಹಿತರ ಆಶೀರ್ವಾದ ಹಾಗೂ ಪ್ರೋತ್ಸಾಹವಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸೌಂದರ್ಯಾ, ನೃತ್ಯರಂಗದಲ್ಲಿ ಇನ್ನಷ್ಟು ಮಿಂಚಿ ಸಾಧನೆಯ ಉತ್ತುಂಗಕ್ಕೇರಲಿ ಎಂಬ ಶುಭ ಹಾರೈಕೆ.

ಚಿತ್ರ-ಬರಹ : ಯೋಗೀಶ್ .ಕೆ. ಸೋಣಂದೂರು, ಬೆಳ್ತಂಗಡಿ

soundarya3

soundarya2

sk2


[yuzo_related]

Leave a Reply

Your email address will not be published. Required fields are marked *