ದಟ್ಟಕಾಡಿನ ಮಧ್ಯೆ ನೀಲಮ್ಮ ಮೂಲ್ಯರ ಒಬ್ಬಂಟಿ ಜೋಪಡಿ ಬದುಕು : ಅಸಹಾಯಕ ಹಿರಿಜೀವಕ್ಕೆ ಬೇಕಿದೆ ಆಸರೆ


ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಈ ವೃದ್ಧೆ ಒಬ್ಬಂಟಿಯಾಗಿ ಒಂದಲ್ಲ- ಎರಡಲ್ಲ ಕಳೆದ ಇಪ್ಪತ್ತೊಂದು ವರ್ಷಗಳಿಂದ ದಟ್ಟ ಕಾನನದ ಮಧ್ಯೆ ಕೋಳಿಯ ಗೂಡಿನಂಥ ಪುಟ್ಟ ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದಾರೆ.ಪತಿಯನ್ನು ಕಳೆದುಕೊಂಡು ಅನಾಥೆಯಾಗಿರುವ ವೃದ್ಧೆಗೆ ಕಡೇ ಕಾಲಕ್ಕೆ ಆಸರೆಯಾಗಿರುವ ಯಾರೂ ಇಲ್ಲ. 

neelamma

ಒಬ್ಬಂಟಿಯಾಗಿ ಬದುಕುತ್ತಿರುವ ಈ ಅಜ್ಜಿಯ ಹೆಸರು ನೀಲಮ್ಮ ಮೂಲ್ಯ. ಸುಮಾರು 65 ವರ್ಷ ಪ್ರಾಯದ ಇವರ ಜೋಪಡಿ ಗುಡಿಸಲು ಇರುವುದು ಪುತ್ತೂರು ನರಿಮೊಗರು ಗ್ರಾಮದ ಮುಕ್ವೆ ಬದಿನಾರು ಎಂಬಲ್ಲಿ ಕಾಡಿನ ಮಧ್ಯೆ. ಯಾವ ಮೂಲಭೂತ ಸೌಕರ್ಯವೂ ಇಲ್ಲದ ಯಾರದೋ ಜಮೀನಿನ ಜೋಪಡಿಯಲ್ಲಿ ಮಳೆಯಿಂದ ರಕ್ಷಣೆ ಪಡೆಯುವುದಕ್ಕಾಗಿ ತಗಡಿನ ಶೀಟಿನ ಹೊದಿಕೆ ಮಾಡಲಾಗಿದೆ. ಸರಿಯಾದ ಗೋಡೆಯೂ ಇಲ್ಲದ ಜೋಪಡಿಗೆ ಚಿಮಣಿ ದೀಪವೇ ಬೆಳಕಿನ ಆಸರೆ. ಗುಡಿಸಲಿಗೆ ಹೋಗುವುದಕ್ಕೆ ಸರಿಯಾದ ದಾರಿಯೂ ಇಲ್ಲದೇ, ಮೂಲಸೌಲಭ್ಯ ಗಾಳಿಯೂ ಸೋಕದೆ ನರಳುತ್ತಿರುವ ಊರಿನ ಮಧ್ಯೆ ಯಾವುದೇ ಕಿಟಕಿ ಬಾಗಿಲುಗಳಿಲ್ಲದ ಅಭಧ್ರತೆಯ ಜೋಪಡಿ ಮನೆಯಲ್ಲಿ ಅನಾಥೆಯಾಗಿ ಒಂಟಿ ಜೀವನ ನಡೆಸುತ್ತಿರುವ ಅಜ್ಜಿಯನ್ನು ನೋಡಿದರೆ ಕಲ್ಲು ಮನಸ್ಸೂ ಕರಗುವಂತಿದೆ.

neelamma5
ಥೇಟ್ ಕೋಳಿ ಗೂಡಿನಂತೆ ಕಾಣುವ ಈ ಗುಡಿಸಲೇ ನೀಲಮ್ಮ ಮೂಲ್ಯರ ಪಾಲಿಗೆ ಅರಮನೆ. ಎಳೆ ವಯಸ್ಸಿನಲ್ಲೇ ಇವರ ಮದುವೆಯಾಗಿತ್ತು. ಸ್ವಂತ ಜಮೀನು ಇಲ್ಲದ ಇವರಿಗೆ ಅಂದಿನಿಂದಲೇ ಬೇರೆಯವರ ಒಕ್ಕಲಿನಲ್ಲಿ ಇವರ ಕುಟುಂಬ ವಾಸ ಮಾಡುವ ಅನಿವಾರ್ಯತೆ ಎದುರಾಗಿತ್ತು. ಮಕ್ಕಳಿಲ್ಲದ ಇವರ ಕುಟುಂಬ ಯಾರದೋ ಒಕ್ಕಲಿನಲ್ಲಿ ದುಡಿಯುತ್ತಾ ದಿನಕಳೆದರೆ ಸಾಕು ಎಂಬಂತಿದ್ದ ನೀಲಮ್ಮ ಮೂಲ್ಯರ ಪತಿ ಇಲ್ಲದ ಕಾಟ ಕೊಟ್ಟು ಇಪ್ಪತ್ತೊಂದು ವರ್ಷದ ಹಿಂದೆ ಇಹಲೋಕ ತ್ಯಜಿಸಿದ್ದರು. ಅಂದಿನಿಂದ ಇಲ್ಲದೆ ಒಬ್ಬಂಟಿಯಾಗಿ ಅಕ್ಷರಶ ಅನಾಥ ಬದುಕು ಇವರದ್ದು. ತನ್ನವರು ಎನ್ನುವ ಯಾರೂ ಇಲ್ಲದೆ ನೆರೆಕೆರೆಯಲ್ಲಿ ದುಡಿಯುತ್ತ ಅಸಹಾಯಕತೆಯಲ್ಲಿ ದಿನ ಕಣ್ಣೀರಿನಲ್ಲೇ ದಿನದೂಡುವ ನೀಲಮ್ಮ ಎರಡು ದಿನಕ್ಕೊಂದು ಬಾರಿ ಅನ್ನ ಬೇಯಿಸಿ ಉಣ್ಣುತ್ತಾರೆ. ಒಬ್ಬಂಟಿ ಜೀವನದ ಬೇಸರ ಕಳೆಯಲು ಮನೆಯಲ್ಲಿ ಒಂದು ನಾಯಿ ಮತ್ತು ಬೆಕ್ಕನ್ನು ಸಾಕಿದ್ದು, ಅದೇ ಅವರ ಸಂಗಾತಿ.

neelamma4
ಮುರುಕಲು ಮೇಲ್ಚಾವಣಿ, ಜೋಪಡಿಯ ಒಂದು ಬದಿಗೆ ತೆಂಗಿನಗರಿಯ ಹೊದಿಕೆ ಮಾಡಲಾಗಿದ್ದು, ಮತ್ತೊಂದು ಬದಿಯ ಗೋಡೆ ಕುಸಿದು ಬೀಳುವ ಹಂತದಲ್ಲಿದೆ. ಕುಡಿಯುವ ನೀರಿಗಾಗಿ ದೂರದಲ್ಲಿರುವ ಆಳದ ತಡೆಗೋಡೆ ಇಲ್ಲದ ಅಪಾಯಕಾರಿ ಬಾವಿ ನೀರೇ ಆಶ್ರಯ. ಇಂಥ ದುಸ್ಥಿತಿಯಲ್ಲಿ ದಿನದೂಡುತ್ತಿರುವ ನೀಲಮ್ಮ ಮೂಲ್ಯರನ್ನು ಸರಕಾರವಂತೂ ಕಣ್ಣೆತ್ತಿ ನೋಡಿಲ್ಲ. ಸಾರ್ವಜನಿಕರ ನೆರವಿನ ಅಗತ್ಯವಂತೂ ಖಂಡಿತಾ ಇದೆ.
ಸರ್ಕಾರ ಬಡ ಅಬಲೆಯರಿಗಾಗಿ,ವಿಧವೆಯರಿಗಾಗಿ ವಿಶೇಷ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಅದು ಉಳ್ಳವರ, ಸಿರಿವಂತರ ಹಸ್ತಕ್ಷೇಪ, ಅತಿಕ್ರಮಣದಿಂದಾಗಿ ಫಲಾ­ನು­ಭವಿಗಳಿಗೆ ಸಿಗುವುದು ವಿರಳವೇ ಸರಿ. ಹೀಗಾಗಿ ಬಹಳಷ್ಟು ಪ್ರದೇಶಗಳಲ್ಲಿ ಇಂಥ ಕುಟುಂಬಗಳು ಇನ್ನೂ ತುಳಿತಕ್ಕೆ ಒಳಗಾಗಿವೆ. ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ವಿಫಲವಾಗಿ ಜೋಪಡಿಯಂಥ ಮನೆಯಲ್ಲಿ ನರಕಯಾತನೆ ಅನುಭವಿಸುತ್ತಿರುವ ಅನೇಕ ಕುಟುಂಬಗಳು ನಮ್ಮ ಮಧ್ಯೆ ಕಾಣಸಿಗುತ್ತವೆ ಅದಕ್ಕೆ ಒಂದು ನೀಲಮ್ಮ ಮೂಲ್ಯ ಉದಾಹರಣೆ ಅಷ್ಟೇ.

ನೀಲಮ್ಮ ಮೂಲ್ಯ ಅವರ ಸ್ಥಿತಿಯನ್ನು ಬೆಳಕಿಗೆ ತಂದಿರುವ ಸ್ಥಳೀಯ ಚಾನೆಲೊಂದು (ಕಹಳೆ ನ್ಯೂಸ್) `ಅಜ್ಜಿಗೊಂದು ಬೆಚ್ಚಗಿನ ಗೂಡು’  ಎಂಬ ಅಭಿಯಾನ ಆರಂಭಿಸಿರುವ ಮಾಹಿತಿ ಲಭಿಸಿದೆ. ಅದಕ್ಕೆ ನೀಲಮ್ಮ ಮೂಲ್ಯರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿದೆ. Neelamma Mooolya W/O Manjappa Moolya State Bank of India Narimogaru Branch A/c No 64154072597 IFSC: SBIN0041050 ಈ ಖಾತೆಗೆ ನೆರವು ನೀಡಿ ಸಹಕರಿಸುವಂತೆ ವಿನಂತಿ ಮಾಡಲಾಗಿದೆ. 

ಚಿತ್ರ-ಮಾಹಿತಿ ಕೃಪೆ : ಕಹಳೆ ನ್ಯೂಸ್


[yuzo_related]

Leave a Reply

Your email address will not be published. Required fields are marked *