ಕೊಲ್ಯ ಕುಲಾಲ ಸಂಘದ ಮಾಜಿ ಅಧ್ಯಕ್ಷ, ಸಮಾಜಸೇವಕ ಮಾಧವ ಕುಲಾಲ್ ಉಳ್ಳಾಲಬೈಲು


madhav

ಕೊಲ್ಯ ಕುಲಾಲ ಸಂಘದ ಮಾಜಿ ಅಧ್ಯಕ್ಷ, ಸಮಾಜಸೇವಕ ಮಾಧವ ಕುಲಾಲ್ ಉಳ್ಳಾಲಬೈಲು. ವಕೀಲರ ಕಚೇರಿಗಳಲ್ಲಿ ಗುಮಾಸ್ತರಾಗಿ ಸುಮಾರು 54 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರು ಉಳ್ಳಾಲ ಪುರಸಭೆಗೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದ್ದರು. ಜೂನ್ ೧೭, ೨೦೧೮ರಂದು ನಿಧನರಾದ ಮಾಧವ ಅವರವ್ಯಕ್ತಿತ್ವದ ಕುರಿತು ಪತ್ರಕರ್ತ ತಾರಾನಾಥ ಕಾಪಿಕಾಡು ಬರೆದ ನುಡಿ ನಮನವನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ.
ಮಾಧವಣ್ಣ ವೃತ್ತಿಯಲ್ಲಿ ವಕೀಲರ ಗುಮಾಸ್ತರು. ದೀರ್ಘ ಕಾಲದ ವೃತ್ತಿ ಅನುಭವ ಅವರದ್ದು. ಸೌಮ್ಯವಾದ ಮಾತು, ಸಜ್ಜನಿಕೆಯ ನಡತೆ ಮಾಧವಣ್ಣನ ತನ್ನ ಬದುಕಿನಲ್ಲಿ ಪಾಲಿಸಿಕೊಂಡ ಶಿಸ್ತು.. ಮಂಗಳೂರು ನಗರದಲ್ಲಿ ಹಾಗೂ ಮಂಗಳೂರು ಕೋರ್ಟ್ ನಲ್ಲಿ ಮಾಧವಣ್ಣನಿಗೆ ಇದ್ದಂತಹ ಗೌರವ ಅಪಾರವಾದದ್ದು. ಅವರಿಗಿದ್ದ ಪರಿಚಿತರ ಬಳಗ ತುಂಬಾ ವಿಸ್ತಾರವಾದದ್ದು , ಅವರಲ್ಲಿದ್ದ ಕಾನೂನಿನ ಮಾಹಿತಿ . ಕೋರ್ಟ್ ವ್ಯವಹಾರದ ಬಗೆಗಿನ ಅನುಭವ ಆಳಾವಾದದ್ದು, , ಆದರೆ ಇದ್ಯಾವುದರ ಬಗ್ಗೆಯೂ ಅವರಲ್ಲಿ ಆಡಂಬರ ಅನ್ನುವುದು ಇರಲೇ ಇಲ್ಲ. ಸಾಮಾಜಿಕ, ರಾಜಕೀಯ ಜೀವನದಲ್ಲಿಯೂ ಪ್ರಾಮಾಣಿಕತೆಯಿಂದ ಮಾಧವಣ್ಣ ತನ್ನನ್ನು ತೊಡಗಿಸಿಕೊಂಡವರು . ಬಿಜೆಪಿಯ ನಿಷ್ಟಾವಂತ ಕಾರ್ತಕರ್ತರು ಅವರು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಉಳ್ಳಾಲ ಪುರಸಭೆಗೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದ್ದರು. ದುಡ್ಡಿದ್ದವರಿಗಷ್ಟೇ ರಾಜಕೀಯ ಸ್ಥಾನಮಾನ ಹಂಚಿಕೆಯಾಗುವ ಇತ್ತೀಚಿನ ಸನ್ನಿವೇಶದಲ್ಲಿ ಮಾಧವಣ್ಣನ ಹಿರಿತನವನ್ನು ಅವರ ಪಕ್ಷ ಗೌರವಿಸಿದ್ದು ಒಂದು ಅಪರೂಪದ ವಿದ್ಯಾಮಾನವಾಗಿತ್ತು .

ಮಾಧವಣ್ಣನ ಬದುಕು ಭಾರತೀಯ ಸಾಮಾಜಿಕ ಮೌಲ್ಯವನ್ನು ಎತ್ತಿಹಿಡಿಯುವಂತಹ ನಡೆಯಾಗಿತ್ತು. ಅವರೊಬ್ಬ ಅಪ್ಪಟ ಬಿಜೆಪಿ ಕಾರ್ಯಕರ್ತ. ದೀರ್ಘಕಾಲದಿಂದ ಬಿಜೆಪಿಯೊಂದಿಗೆ ಹಾಗೂ ಹಿಂದಿನ ಜನಸಂಘದೊಂದಿಗೆ ನಂಟು. ಆದರೆ ಅವರ ರಾಜಕೀಯ ಬದುಕಿಗೂ ಸಾಮಾಜಿಕ ಬದುಕಿಗೂ ಸ್ನೇಹ ಸೇತು ಇತ್ತು. ರಾಜಕೀಯ ಕಾರಣಕ್ಕಾಗಿ ಅವರು ಯಾರೊಂದಿಗೂ ನಿಷ್ಠುರ ಮಾಡಿಕೊಂಡವರಲ್ಲ. ಮೌಲ್ಯಾಧಾರಿತ ರಾಜಕೀಯ ಮಾಡಿದ ಮಾಧವಣ್ಣ ಸಾಮಾಜಿಕ ಬದುಕಿನಲ್ಲಿಯೂ ಮೌಲ್ಯವನ್ನು ಎತ್ತಿತೋರಿಸಿದವರು. ಇವತ್ತು ರಾಜಕೀಯ ಕಾರಣಕ್ಕಾಗಿ ಧರ್ಮಧರ್ಮಗಳ ನಡುವೆ ಕಂದರವನ್ನು ತಂದಿಡುತ್ತಿರುವಾಗ ಮಾಧವಣ್ಣ. ಅಂತಹದರ ಬಗ್ಗೆ ಎಚ್ಚರಿಕೆಯ ನಡೆನ್ನಿಟ್ಟವರು. ಅಚ್ಚರಿಯ ವಿಷಯ ಅಂದ್ರೆ …ಬಿಜೆಪಿಯ ಹಿರಿಯ ಕಾರ್ಯಕರ್ತ ಮಾಧವಣ್ಣ ದೀರ್ಘ ಕಾಲ ವೃತ್ತಿ ಮಾಡಿದ್ದು ಮುಸ್ಲಿಂ ಸಮುದಾಯದ ಹಿರಿಯ ವಕೀಲರೊಬ್ಬರ ಜೊತೆಗೆ. ಮಂಗಳೂರಿನ ವಕೀಲ ಬಿ.ಎ.ಮಹಮ್ಮದ್ ಹನೀಫ್ ಅವರ ವಕೀಲ ಗುಮಾಸ್ತರಾಗಿ ಹದಿನಾರು ವರ್ಷಗಳ ಕಾಲ ಮಾಧವಣ್ಣ ಕೆಲಸ ನಿರ್ವಹಿಸಿದ್ದಾರೆ. ವಿಧಿ ಲೀಲೆ ಮಾಧವಣ್ಣನನ್ನು ಬೇಗನೆ ಕರೆಸಿಕೊಂಡಿತು , ಇಲ್ಲವಾದಲ್ಲಿ ಮಾಧವಣ್ಣ ಇನ್ನೆಷ್ಟೋ ವರ್ಷಗಳ ಕಾಲ ಕೆಲಸ ಮಾಡುವವರಿದ್ದರು. ಇನ್ನೂ ವಿಚಿತ್ರ ಅಂದ್ರೆ ..ಮಾಧವಣ್ಣ ಬಿಜೆಪಿ , ವಕೀಲ ಮಹಮ್ಮದ್ ಹನೀಫ್ ಕಾಂಗ್ರೆಸ್ . ಹನೀಫ್ ಅವರು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿ. ಮಾಧವಣ್ಣ ಮತ್ತು ಹನೀಫ್ ಅವರ ನಂಟು ಕರಾವಳಿಯ ಇವತ್ತಿನ ಸನ್ನಿವೇಶದಲ್ಲಿ ಅಪರೂಪದ ಜೋಡಿ. ಇಬ್ಬರ ನಡುವೆಯೂ ಯಾವತ್ತೂ ತಕರಾರು ಬಂದದ್ದೇ ಇಲ್ಲ , ರಾಜಕೀಯ ತಕರಾರೂ ಇದ್ದದ್ದೆ ಇಲ್ಲ. ಕೆಲಸಕ್ಕೆ ಸೇರುವಾಗ ಮಾಧವಣ್ಣನ ರಾಜಕೀಯ ಹನೀಫ್ ಅವರಿಗೆ ಗೊತ್ತಿರಲಿಲ್ಲವೇ ಎಂದು ಕೇಳಿದರೆ, ಅದೂ ಗೊತ್ತಿತ್ತು. … ಹದಿನಾರು ವರ್ಷಗಳ. ಹಿಂದೆ ಒಂದೆರಡು ಬಾರೀ ಜೊತೆಯಾಗಿ ಹೋಗುವಾಗ ಮಾಧವಣ್ಣ ಅವರೇ ಹನೀಫ್ ಅವರಲ್ಲಿ ತಾನು ನಿಮ್ಮ ಕಚೇರಿಗೆ ಕೆಲಸಕ್ಕೆ ಬರುತ್ತೇನೆ ಎಂದು ಹೇಳಿದ್ದರಂತೆ.
ಮಾಧವಣ್ಣನಿಗೆ ಏನೂ ಉತ್ತರ ಕೊಡುವುದೆಂಬ ಜಿಜ್ಞಾಸೆ ಹನೀಫ್ ಅವರನ್ನು ಕಾಡಲಾರಂಭಿಸಿತ್ತು , ಸ್ವಲ್ಪ ದಿನದ ಬಳಿಕ ಹೇಳುತ್ತೇನೆ ಎಂದು ಹನೀಫ್ ಹೇಳಿದ್ದರಂತೆ .
ಅಷ್ಟಕ್ಕೂ ಮಾಧವಣ್ಣ ಬಿಜೆಪಿಯವರು , ನಾನು ಕಾಂಗ್ರೆಸ್ , ಅಷ್ಟೂ ಅಲ್ಲದೆ ನಾನು ಓರ್ವ ಮುಸ್ಲಿಮ್ ..ಹೇಗೆ ಸರಿ ಹೋಗಬಹುದೇ ಎಂದು ತಲೆಯಲ್ಲಿ ಕೊರೆಯುತ್ತಿಂತೆ .
ಮಾಧವಣ್ಣನ ಗುಣ ನಡತೆ ಬಗ್ಗೆ ಗೌರವವಿದ್ದ ಹನೀಫ್ ಅವರು ಕೆಲವೇ ದಿನಗಳಲ್ಲಿ ತನ್ನ ಕಚೇರಿಗೆ ಮಾಧವಣ್ಣನನ್ನು ಸೇರಿಸಿಕೊಂಡರು. ಹದಿನಾರು ವರ್ಷಗಳ ಸ್ನೇಹಚಾರದಲ್ಲಿ ಒಮ್ಮೆಯೂ ಮಾಧವಣ್ಣ ಹಾಗೂ ನನ್ನ ನಡುವೆ ತಕರಾರು ಬಂದಿಲ್ಲ. ಅವರಿಗೆ ನಾನು ಅಪಾರ ಗೌರವ ಕೊಡುತ್ತಿದ್ದೆ. ಅವರೂ ನನಗೆ ಅದೇ ರೀತಿಯ ಗೌರವ ಕೊಡುತ್ತಿದ್ದರು . ಅವರು ಅಪ್ಪಟ ಪ್ರಾಮಾಣಿಕ ಮನುಷ್ಯನಾಗಿದ್ದರು. ಅವರ ಕಷ್ಟ , ಖಾಸಗಿ ವಿಚಾರವನ್ನು ನಾನಾಗಿ ಕೇಳದಿದ್ದರೇ ಅವರೂ ಎಂದೂ ಹೇಳಿಕೊಂಡವರಲ್ಲ …ಮೊನ್ನೆ ಜ್ವರ ಬಂದಾಗಲೂ ರೆಸ್ಟ್ ಮಾಡುವಂತೆ ನಾನೇ ಹೇಳಿದ್ದೆ , ಆದರೆ ಜ್ವರದ ನಡುವೆಯೂ ಎರಡು ದಿನ ಕಚೇರಿಗೆ ಬಂದು ಅವರ ಕಡತಗಳನ್ನೆಲ್ಲಾ ಜೋಡಿಸಿ ಇಟ್ಟು ಹೋಗಿದ್ದಾರೆ …ಏನೂ ಮಾಡುವುದು …ಈಗ ಮಾಧವಣ್ಣ ಇಲ್ಲ. …..ಎಂದು ದುಖಿಸುತ್ತಾ ಚೆಂಬುಗುಡ್ಡೆಯ ರುದ್ರಭೂಮಿ ಆವರಣದಲ್ಲಿ ನಿಂತುಕೊಂಡು ಹನೀಫ್ ನೆನಪು ಹಂಚಿಕೊಂಡರು. ಹನೀಫ್ ಅವರ ಪುತ್ರ ಕೂಡ ಜೊತೆಗೆ ಬಂದಿದ್ದ. .
ಅಂತಿಮ ಸಂಸ್ಕಾರದ ಕೊನೆಗೆ ಅಗ್ನಿಯ ಚಿತೆಗೆ ಕೊಲ್ಲಿ ಎಸೆಯುವುದಕ್ಕೆ ಸಮಯವಾಗಿತ್ತು, , ಇದು ಯಾಕೆ ಎಸೆಯುತ್ತಾರೆ ಎಂದು ಹನೀಫ್ ನನ್ನಲ್ಲಿ ಕೇಳಿದರು. ಇದು ಧಪನ ಭೂಮಿಯಲ್ಲಿ ಹಾಕುವ ಕೊನೆಯ ಮಣ್ಣಿನ ಹಿಡಿಯಂತೆ ಎಂದು ಹೇಳಿ , ನೀವು ಇಲ್ಲೆ ನಿಂತಿರಿ ಎಂದು ನಾನು ಹೇಳಿದಾಗ ಬಾವುಕರಾದ ಹನೀಫ್ ಅವರೂ ಜೊತೆಗೆ ನಿಂತು ಒಂದು ತುಂಡು ಕೊಲ್ಲಿಯನ್ನು ಚಿತೆಗೆ ಹಾಕಿದ ಬಳಿಕ ಹೊರಟರು.
ಮಾಧವಣ್ಣನ ದೇಹ ಅಗ್ನಿಯಲ್ಲಿ ಲೀನವಾದರೂ ಮಣ್ಣಿನಲ್ಲಿ ಮಣ್ಣಾಗಿ ಹೋದರೂ ಅವರ ಎರಡು ಕಣ್ಣುಗಳು ಎರಡೂ ಜೀವಕ್ಕೆ ಹೊಸ ಬೆಳಕು ಕೊಟ್ಟಿದೆ. ನೇತ್ರದಾನ ಮಾಡಿದ ಮಾಧವಣ್ಣ. ವೈಯಕ್ತಿಕ ಬದುಕಿನಲ್ಲೂ ಸಾಮಾಜಿಕ ಬದುಕಿನಲ್ಲೂ ಎಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ. ಕಷ್ಟದ ಕುಟುಂಬ ಬದುಕಿನ ಮಾಧವಣ್ಣನ ಮನೆಯಲ್ಲಿ ಇನ್ನೂ ಕಷ್ಟಗಳು ಹಾಗೇ ಉಳಿದು ಹೋದವು. ಅದೇ ತುಂಬಾ ನೋವಿನ ವಿಚಾರ.


[yuzo_related]

Leave a Reply

Your email address will not be published. Required fields are marked *