ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ಪ್ರಾಚೀನ ತುಳು ಶಾಸನ ಪತ್ತೆ


ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಪ್ರಸ್ತುತ ಕುಲಾಲ ಸಮಾಜದ ಆಡಳಿತದಲ್ಲಿರುವ ಸುಮಾರು 2,500 ವರ್ಷಗಳಿಗೂ ಹಳೆಯದಾದ ಮಂಗಳೂರಿನ ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ತುಳು ಲಿಪಿ ಮತ್ತು ತುಳು ಭಾಷೆಯಲ್ಲಿ ಬರೆದ ಅತ್ಯಂತ ಪ್ರಾಚೀನ ಶಾಸನ ಪತ್ತೆಯಾಗಿದೆ. ಆಳುಪ ಚಕ್ರವರ್ತಿ 1ನೇ ಕುಲಶೇಖರನ ಕಾಲದ ಈ ಶಾಸನವನ್ನು ಸಂಪೂರ್ಣವಾಗಿ ತುಳು ಭಾಷೆಯಲ್ಲಿ ರಚಿಸಲ್ಪಟ್ಟಿರುವುದು ತುಳು ಭಾಷೆ ಹಾಗೂ ಸಂಸ್ಕೃತಿಯ ಅಧ್ಯಯನಕ್ಕೆ ಭದ್ರವಾದ ಬುನಾದಿಯನ್ನು ಒದಗಿಸಿದೆ.

PowerPoint Presentation

ಈ ಶಾಸನ ಶ್ರೀ ಹರಿಯೇ ನಮಃ ಎಂಬ ಒಂದು ಸಾಲಿನ ಪ್ರಾರ್ಥನಾ ಶ್ಲೋಕದೊಂದಿಗೆ ಆರಂಭವಾಗಿದೆ. ನಂತರ ಶಾಸನದಲ್ಲಿ ಸೌರ ಪಂಚಾಗದ ರೀತ್ಯಾ ಕಾಲಮಾನವನ್ನು ಉಲ್ಲೇಖಿಸಲಾಗಿದೆ. ಶಾಸನೋಕ್ತ ವಿವರದ ಪ್ರಕಾರ ಸಕ್ ಪದರಾಡ್ ಅಂದರೆ ಶಕ 12, ಮೇಘ ಮಾಸ, ಕೃಷ್ಣ ಪಕ್ಷ ದಲ್ಲಿ ಧನುಪುಳೇ (9ನೇ ರಾಶಿ) ಅಂದರೆ 9ನೇ ದಿನ ಕಳೆದು ಎಂದು ಅರ್ಥವಿಸಿಕೊಂಡಲ್ಲಿ ಈ ಶಾಸನದ ಕಾಲ ಕ್ರಿ.ಶ. 1159, ಫೆಬ್ರವರಿ 10, ಶನಿವಾರ ಕ್ಕೆ ಸರಿಹೊಂದುತ್ತದೆ. ನಂತರ ಶಾಸನ ಪದಿರಾಡ್ ಊಱ್ ಸೀಮೆಲ ಎಂದು ಉಲ್ಲೇಖಿಸಿದ್ದು, ಈ ದೇವಾಲಯ 12 ಊರುಗಳಿಗೆ ಪಿತೃ ದೇವತೆಯಾಗಿತ್ತೆಂದು ತಿಳಿಸುತ್ತದೆ.

ಶಾಸನದ 9ನೇ ಸಾಲಿನಲ್ಲಿ ಕುಳೆ [ಸೇಖರ] ಲೋಕೋಂತಮಾಂತ ಎಂಬ ಉಲ್ಲೇಖವಿದೆ. ಅಂದರೆ ಭುವನ ಅಥವಾ ಲೋಕ ವಿಖ್ಯಾತ ಕುಲಶೇಖರನೆಂದು, ಆಳುಪ ದೊರೆಯನ್ನು ಕೊಂಡಾಡಲಾಗಿದೆ. ಮುಂದಿನ ಸಾಲುಗಳು ನೆಲದಲ್ಲಿ ಹುಗಿದು ಹೋಗಿವೆ. ಶಾಸನದ ಮೂಲ ಉದ್ದೇಶ ಧರ್ಮಸೇನಜ್ಙ ಎಂಬ ವ್ಯಕ್ತಿ ತಾನು ಮಾಡಿದ ಯಾವುದೋ ಪಾಪಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಂಡದ್ದನ್ನು ದಾಖಲಿಸುವುದು ಶಾಸನದ ಮೂಲ ಉದ್ದೇಶವಾಗಿದೆ.

ಕುಲಶೇಖರ ಶ್ರೀ ವೀರನಾರಾಯಣ ದೇವಾಲಯ – ಶಾಸನ ಪಾಠ
(ತುಳು ಲಿಪಿ, ತುಳು ಭಾಷೆ,)
1. ಶ್ರೀ ಹರಿಯೆ ನಮಃ?
2. ಧನುಪುಳೇ ಮೇಘಮಾಸ (ಕೃಷ್ಣ?)
3. ಪಕ್ಷ ಸಂದು ಧರ್ಮಸೇನ
4. ಜ್ಞ ವದರೋಹಪರಾಧ ******
5. ರತ್ನತೆಂದ್ ಇಂಚಸ್ಟ್ ಉದ್‌ಬ ******
6. ಸಕ್ ಪದರಾಡ್ ಪದಿರಾಡ್ (ಊಱ್?)
7. ಸೀದೆ (ಮೆ)ಲ ಸೆದ್ಧವಾದ (ಸಪ್ತಪಾದ) ಮೂಲತೋಗ್ರ
8. ವ್ರಣೋಳವ ಋಕ್ಕಾಲ ದಿಕ್ಕ್
9. ಕುಳೆ[ಸೇಖರ] ಲೋಕೊಂತಮಾಂತ

ಶಾಸನದ ಮಹತ್ವ : ಶಾಸನ ಆಳುಪರ ಚರಿತ್ರೆ ಮತ್ತು ತುಳು ಸಾಹಿತ್ಯ ಹಾಗೂ ತುಳು ಲಿಪಿ ಅಧ್ಯಯನದ ದೃಷ್ಠಿಯಿಂದ ಅತ್ಯಂತ ಮಹತ್ವದ ದಾಖಲೆಯಾಗಿದೆ. ಈ ಶಾಸನ 1ನೇ ಕುಲಶೇಖರ ಆಳುಪೇಂದ್ರನ ಕುರಿತಾಗಿ ದೊರೆಯುವ ಪ್ರಪ್ರಥಮ ಶಾಸನವಾಗಿದೆ, ಇದುವರೆಗೆ ಕ್ರಿ.ಶ. 1162 ರ ಕೊರ್ಸಿ-ಕಾಲ್ತೋಡು ಶಾಸನವನ್ನು ಆತನ ಪ್ರಥಮ ಶಾಸನವೆಂದು ಭಾವಿಸಲಾಗಿತ್ತು. ಆದರೆ, ಕುಲಶೇಖರದ ತುಳು ಶಾಸನ ಆತನ ಆಳ್ವಿಕೆಯ ಕ್ರಿ.ಶ. 1159ರ ಕಾಲಕ್ಕೆ ಸಂಬಂಧಿಸಿರುವುದರಿಂದ, ಇದೇ ಆತನ ಪ್ರಥಮ ಶಾಸನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶಾಸನದಲ್ಲಿ ಶುದ್ಧ ತುಳು ಪದಗಳಾದ ಧನುಪುಳೇ, ರತ್ನತೆಂದ್, ಸಕ್, ಪದರಾಡ್, ಪದಿರಾಡ್, ದಿಕ್ಕ್, ಲೋಕೊಂತಮಾಂತ ಮುಂತಾದ ಪದಗಳನ್ನು ಬಳಸಲಾಗಿದೆ. ಆದ್ದರಿಂದ ಈ ಶಾಸನವನ್ನು ತುಳು ಭಾಷೆಯ ಅತ್ಯಂತ ಪ್ರಾಚೀನ ಹಾಗೂ ಪ್ರಪ್ರಥಮ ಶಾಸನವೆಂದು ಪರಿಗಣಿಸಬಹುದಾಗಿದೆ. ಈ ಶಾಸನ ಶೋಧ, ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಹೋರಾಟಕ್ಕೆ ಪ್ರಬಲ ಆಧಾರವಾಗಿದೆ.

ಈ ತುಳು ಶಾಸನ ಅಧ್ಯಯನದಲ್ಲಿ ಹಾಗೂ ಅರ್ಥೈಸುವಲ್ಲಿ ನನಗೆ ನೆರವು ನೀಡಿದ ಶ್ರೀ ಧರ್ಮಸ್ಥಳ ಸಂಸ್ಕೃತಿ ಸಂಶೋಧನಾ ಸಂಸ್ಥೆಯ ತುಳು-ಸಂಸ್ಕೃತದ ಹಿರಿಯ ವಿದ್ವಾಂಸರಾದ ಶ್ರೀ ವಿಘ್ನರಾಜ್ ರವರಿಗೆ ನಾನು ಅಭಾರಿಯಾಗಿದ್ದೇನೆ. ಈ ಶಾಸನಾಧ್ಯಯನಕ್ಕೆ ಅಧಿಕೃತವಾಗಿ ಆಹ್ವಾನಿಸಿದ ಮಂಗಳೂರಿನ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ, ದೇವಾಲಯದ ಆಡಳಿತ ಮಂಡಳಿಯವರಿಗೆ ಹಾಗೂ ಸ್ಥಳೀಯ ಯುವಕರಾದ ವಿಶ್ವಜಿತ್ ಹಾಗೂ ನನ್ನ ವಿದ್ಯಾರ್ಥಿಗಳಾದ ಪ್ರಜ್ಞಾ, ಕೀರ್ತಿ ಮತ್ತು ಶ್ರೇಯಸ್ ರವರಿಗೆ ನಾನು ಅಭಾರಿಯಾಗಿದ್ದೇನೆ ಎಂದು ಎಂ.ಎಸ್.ಆರ್.ಎಸ್. ಕಾಲೇಜು, ಶಿರ್ವ ಇಲ್ಲಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊ. ಟಿ.ಮುರುಗೇಶಿ ತಿಳಿಸಿದ್ದಾರೆ.


Related News

ತೋಕೂರು ಕುಲಾಲ ಸಂಘದ ಮಹಾಸಭೆ ಹಾಗೂ ಸಾಧಕರಿಗೆ ಸನ್ಮಾನ...
views 1349
ಮಂಗಳೂರು : ತೋಕೂರು ಕುಲಾಲ ಸಂಘದ ಮಹಾಸಭೆ ಮತ್ತು ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಸಂಘದ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಗೋಪಾಲ ಬಂಗೇರ ಕೊಡೆತ್ತೂರು ಅ...
ಕೇರಳ ಮಣ್ಣ್ ಪಾತ್ರ ನಿರ್ಮಾಣ ಸಮುದಾಯ ಸಭಾದ ಕಣ್ಣೂರು ವಿಭಾಗ...
views 1119
ಕೇರಳ ಕುಂಬಾರರ ಸಂಘಟನೆ ಹಾಗೂ ಸಾಧನೆ ರಾಷ್ಟ್ರದ ಕುಂಬಾರರಿಗೆ ಮಾದರಿ : ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ಕಣ್ಣೂರು : ಕೇರಳ ಕುಂಬಾರರ ಸಂಘಟನೆ ಹಾಗೂ ಸಾಧನೆ ರಾಷ್ಟ್ರದ ಕುಂಬಾರರ...
ದ.ಕ ಜಿಲ್ಲಾ ಕುಲಾಲರ ಮಾತೃ ಸಂಘ : ನಿಧನರಾದ ಹಿರಿಯರಿಗೆ ಶೃದ...
views 97
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇತ್ತೀಚೆಗೆ ನಿಧನರಾದ ಕುಲಾಲ ಸಮಾಜದ ಹಿರಿಯರಾದ ಭೂ ಸೇನೆಯ ನಿವೃತ್ತ ಸುಭೇದಾರ್ ಜೆ ರುಕ್ಮಯ್ಯ ಹಾಗೂ ನಾಟಿ ವೈದ್ಯರೂ, ವ್ಯಾಪಾರಸ್ಥರೂ ಆಗಿದ್ದ...
`ಪವಿತ್ರ’ ತುಳು ಚಿತ್ರದ ಮುಖ್ಯ ಪಾತ್ರದಲ್ಲಿ ಪುತ್ತೂ...
views 2789
ಪುತ್ತೂರು: ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ತುಳು ಚಲನಚಿತ್ರವು ಫೆ. ೫ರಂದು ತೆರೆ ಕಂಡಿದ್ದು, ಚಿತ್ರದ ತಾರಾಗಣದಲ್ಲಿ ಕುಲಾಲ ಸಮಾಜದದವರಾದ ಪುತ್ತೂರಿನ ಕವಿತಾ...
ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಲಾಲ್ ಮೇಲೆ ಹಲ್...
views 2803
ಕುಂದಾಪುರ(ಸೆ.೨೮): ಆಶ್ರಯ ಮನೆ ಹಂಚಿಕೆ ವಿವಾದದಲ್ಲಿ ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಲಾಲ್ ಅವರ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಮೊಳಹಳ್ಳಿ ದಿನೇಶ್ ಹೆಗ್...

Leave a Reply

Your email address will not be published. Required fields are marked *