ಕಸ ವಿಲೇವಾರಿಗೆ ಮಡಿಕೆ ಪ್ರಯೋಗ…ಕ್ರಮ ಹೇಗೆ ? (ವೀಕ್ಷಿಸಿ ವೀಡಿಯೋ ವರದಿ)


ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ತ್ಯಾಜ್ಯ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ನಗರ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವುದೇ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛ ಮಂಗಳೂರು ಮೂಲಕ ಗಮನ ಸೆಳೆಯುತ್ತಿರುವ ಮಂಗಳೂರಿನ ಶ್ರೀರಾಮಕೃಷ್ಣ ಆಶ್ರಮವು ತ್ಯಾಜ್ಯವನ್ನು‌ ಗೊಬ್ಬರವನ್ನಾಗಿ ಪರಿವರ್ತಿಸುವ ಮಡಿಕೆ ಗೊಬ್ಬರ ತಯಾರಿಕೆಯ ಮೂಲಕ ಪರಿಸರ ಕಾಳಜಿ ಮೆರೆದಿದೆ. ಆ ಮೂಲಕ ಸ್ವಚ್ಛತೆ ಜೊತೆ ಮಣ್ಣಿನ ಮಡಿಕೆ ಮತ್ತು ಕುಂಬಾರಿಕೆಗೆ ಮರು ಜೀವ ಕೊಡುವ ಪ್ರಯತ್ನ ಇದಾಗಿದೆ.

 

ಮಡಿಕೆ ಗೊಬ್ಬರ ತಯಾರಿಕೆಯಲ್ಲಿ ಒಂದರ ಮೇಲೊಂದರಂತೆ ಮೂರು ಮಡಿಕೆಗಳಿದ್ದು, ಕೊನೆಯ ಮಡಿಕೆಗೆ ತೆಂಗಿನ ನಾರು ಹಾಕಿ ಮಿಕ್ಕ ಎರಡು ಮಡಿಕೆಗಳನ್ನು ಇಟ್ಟು, ಮೇಲಿನ‌ ಮಡಿಕೆಗೆ ಮೊದಲಿಗೆ ಒಂದು ಪೇಪರ್ ಹಾಕಿ ಸ್ವಲ್ಪ ತೆಂಗಿನ ನಾರು ಹಾಕಿ ಮನೆಯಲ್ಲಿ ಉಳಿದ ತ್ಯಾಜ್ಯಗಳಾದ ತರಕಾರಿ, ಹಣ್ಣುಗಳ ಸಿಪ್ಪೆ, ಅನ್ನ, ಸಾಂಬರ್ನಲ್ಲಿ‌ ಬೇಡದ ತ್ಯಾಜ್ಯ, ಮೀನು, ಮಾಂಸಗಳ ತ್ಯಾಜ್ಯಗಳನ್ನು ದಿನಲೂ ಹಾಕುತ್ತಾ ಬರಬೇಕು.

madake

ಮೊದಲ ಮಡಿಕೆ ತುಂಬಿದರೆ ಎರಡನೇ ಮಡಿಕೆ ಮೇಲಿಟ್ಟು ಮೊದಲಿನ ಮಡಿಕೆಯಯಂತೆ ಮಾಡಿ ತ್ಯಾಜ್ಯಗಳನ್ನು ತುಂಬಿಸಬೇಕು. ಈ ತ್ಯಾಜ್ಯದಲ್ಲಿ ಕಪ್ಪು ಸೈನಿಕ ಎಂಬ ಹುಳುಗಳು ಸೃಷ್ಟಿಯಾಗುತ್ತದೆ. ಈ ಹುಳುಗಳು ದಿನದ 24 ಗಂಟೆಯೂ ತ್ಯಾಜ್ಯವನ್ನು ತಿನ್ನುತ್ತವೆ. ಬಳಿಕ ಆ ಹುಳುಗಳು ಹೊರಹಾಕುವ ತ್ಯಾಜ್ಯವೇ ಗೊಬ್ಬರವಾಗಿ ನಮಗೆ ದೊರೆಯುತ್ತದೆ. ಸಾಧಾರಣ ನಾಲ್ಕೈದು ಜನರಿರುವ ಮನೆಯ ತ್ಯಾಜ್ಯಗಳನ್ನು ದಿನಾಲೂ ಹಾಕುತ್ತಾ ಬಂದರೂ ಸಾಧಾರಣ ಒಂದು ಮಡಿಕೆ ತುಂಬಲು ಒಂದು ತಿಂಗಳು ಬೇಕಾಗುತ್ತದೆ.
ಮರ ಗಿಡಗಳಿಗೆ ಇದು ಅತ್ಯುತ್ತಮ ಗೊಬ್ಬರವಾಗಿದ್ದು, ಮಂಗಳೂರಿನ ಎಂಸಿಎಫ್ ಗೊಬ್ಬರ ತಯಾರಿಕಾ ಸಂಸ್ಥೆ ಬಹಳ ಉತ್ತಮ ಗೊಬ್ಬರವೆಂದು ಪ್ರಶಂಸೆ ವ್ಯಕ್ತಪಡಿಸಿದೆ. ಈಗಾಗಲೇ ರಾಮಕೃಷ್ಣ ಆಶ್ರಮದಿಂದ 400 ಮನೆಗಳಿಗೆ ಈ ಮಡಿಕೆ ಗೊಬ್ಬರಗಳನ್ನು ವಿತರಣೆ ಮಾಡಲಾಗಿದ್ದು, ಈ ಮನೆಯವರೂ ಈ ಗೊಬ್ಬರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿರುತ್ತಾರೆ.

ಇದರಿಂದ ಪ್ರೇರಣೆಗೊಂಡ ರಾಮಕೃಷ್ಣ ಆಶ್ರಮದ ಆಡಳಿತ ಮಂಡಳಿ ಇದನ್ನು ಇನ್ನಷ್ಟು ವಿಸ್ತರಿಸಿ, ಇನ್ನಷ್ಟು ಮನೆಗಳಿಗೆ ಈ ಮಡಿಕೆಗಳನ್ನು ಪೂರೈಸುವ ಮಹತ್ತರವಾದ ಯೋಜನೆಯನ್ನು ಹಾಕಿಕೊಂಡಿದೆ. ಈ ಮಡಿಕೆ ಗೊಬ್ಬರದ ಸೆಟ್ಗೆ ಮಾರುಕಟ್ಟೆ ಬೆಲೆ 2,000 ರೂ. ಇದ್ದರೂ, ರಾಮಕೃಷ್ಣ ಆಶ್ರಮವು ದಾನಿಗಳ ಸಹಕಾರದಿಂದ ಕೇವಲ 500 ರೂ.ಗಳಿಗೆ ಪೂರೈಕೆ ಮಾಡುತ್ತದೆ. ಒಂದು ಸಲ ಈ ಮಡಿಕೆಗಳನ್ನು ಕೊಂಡರೆ ಸಾಕು. ಮಿಕ್ಕಂತೆ ತೆಂಗಿನ ನಾರುಗಳನ್ನು ಮಾತ್ರ ಖರೀದಿಸಬೇಕಾಗುತ್ತದೆ. ಇದಕ್ಕೆ ಬೇಕಾದ ತೆಂಗಿನ ನಾರುಗಳೂ ರಾಮಕೃಷ್ಣ ಆಶ್ರಮದಲ್ಲಿ ದೊರೆಯುತ್ತದೆ. ಇದೂ ಅತೀ ಕಡಿಮೆ ವೆಚ್ಚ ಅಂದರೆ 15 ಕೆಜಿಗೆ 50 ರೂ.ನಲ್ಲಿ ಪೂರೈಕೆಯಾಗುತ್ತದೆ. ಈ ಸುಲಭ ವಿಧಾನದಿಂದ ನಮ್ಮ ಮನೆಗಳ ಕಸಗಳ ವಿಲೇವಾರಿಯ ಸಮಸ್ಯೆಯೂ ಪರಿಹಾರವಾಗುತ್ತದೆ. ಡಂಪಿಂಗ್ ಯಾರ್ಡ್ ಸಮಸ್ಯೆಯೂ ನಿವಾರಣೆಯಾಗುತ್ತದೆ. ಉತ್ತಮ ಗೊಬ್ಬರವೂ ಲಭ್ಯವಾಗುತ್ತದೆ. ಅಲ್ಲದೆ ರೈತರು ಈ ಗೊಬ್ಬರವನ್ನು ಉತ್ತಮ ಬೆಲೆಗೆ ಖರೀದಿಯೂ ಮಾಡುತ್ತಾರೆ.

ಇದೇ ರೀತಿ ಒಣ ಕಸಗಳ ಶೇಖರಣೆಗೂ ರಾಮಕೃಷ್ಣ ಆಶ್ರಮ ಪ್ಲಾಸ್ಟಿಕ್ ಗೋಣಿ ಚೀಲವೊಂದನ್ನು ನೀಡುತ್ತದೆ. ಆ ಗೋಣಿ ಚೀಲ ತುಂಬಿದ ಬಳಿಕ ಅದನ್ನು ಗುಜರಿ ಅಂಗಡಿಗೆ ಕೊಟ್ಟರೆ ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಗುಜರಿ ಅಂಗಡಿಯವರ ದೂರವಾಣಿ ಸಂಖ್ಯೆಯನ್ನು ರಾಮಕೃಷ್ಣ ಆಶ್ರಮದವರೇ ನೀಡುತ್ತಾರೆ. ರಾಮಕೃಷ್ಣ ಆಶ್ರಮವು ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಯೋಜನೆಯಿಂದ ಪ್ರೇರಣೆಗೊಂಡು ಸುಮಾರು ನಾಲ್ಕು ವರ್ಷಗಳಿಂದ ಸ್ವಚ್ಛ ಮಂಗಳೂರು ಯೋಜನೆಯನ್ನು ಕೈಗೊಂಡಿದೆ. ಕಸ ವಿಲೇವಾರಿಯ ಸಮಸ್ಯೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವ, ನಮ್ಮ ನಮ್ಮ ಮನೆಗಳ ಕಸಗಳನ್ನು ನಾವೇ ವಿಲೇವಾರಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದು ಏಕಗಮ್ಯಾನಂದ ಸ್ವಾಮೀಜಿ ತಿಳಿಸಿದ್ದಾರೆ.

ವೀಡಿಯೋ ಲಿಂಕ್ (https://www.youtube.com/watch?v=ONk4eW6I_S4)


[yuzo_related]

Leave a Reply

Your email address will not be published. Required fields are marked *