ಅನಾಥೆಯಾದ ಅಶ್ವಿತಾ ಮೂಲ್ಯರಿಗೆ `ಕುಲಾಲ್ ವರ್ಲ್ಡ್’ ಶೈಕ್ಷಣಿಕ ನೆರವಿನ ಸಾಂತ್ವನ


kokradi

ಬೆಳ್ತಂಗಡಿ(ಏ.೦೬, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕೊಕ್ರಾಡಿ ಗ್ರಾಮದ ಪಾಡಿ ಬನತ್ಯರಡ್ಡ ಮನೆ ಸಂಜೀವ ಮೂಲ್ಯ ಹಾಗೂ ಅವರ ಪತ್ನಿ ಸರೋಜಿನಿ ಅವರು ಕಳೆದ ಗುರುವಾರ ರಾತ್ರಿ ವಿದ್ಯುತ್ ಶಾಕ್‍ನಿಂದ ದಾರುಣವಾಗಿ ಮೃತಪಟ್ಟು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಆದರೆ ಅವರು ಇನ್ನಿಲ್ಲವೆಂಬ ಸತ್ಯವನ್ನು ಅವರ ಏಕೈಕ ಪುತ್ರಿ ಅಶ್ವಿತಾಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ತಂದೆ ತಾಯಿ ನೆನಪಲ್ಲೇ ಕಂಬನಿ ಸುರಿಸುತ್ತಿದ್ದಾರೆ. ಸಾಕಿ ಸಲಹಿದ ಅಪ್ಪ-ಅಮ್ಮನನ್ನು ಕಳೆದುಕೊಂಡು ಅನಾಥವಾಗಿ ಕಳೆದೆರಡು ದಿನಗಳಿಂದ ಅತ್ತು ಅತ್ತು ಸೋತಿರುವ ಅವರ ಭವಿಷ್ಯವನ್ನು ಕತ್ತಲೆಗೆ ನೂಕಿದಂತಾಗಿದೆ. ಬಡತನವಿದ್ದರೂ ಆ ಮನೆಯಲ್ಲಿ ನೆಮ್ಮದಿ ಮತ್ತು ಪ್ರೀತಿಗೆ ಯಾವತ್ತೂ ಕೊರತೆ ಇರಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಆ ಮನೆಯಲ್ಲಿ ನಡೆದ ದುರ್ಘಟನೆಯು ಅಶ್ವಿತಾಳ ಕನಸ್ಸಿನ ಗೋಪುರವನ್ನು ಕೆಡವಿ ಹಾಕಿದೆ. ಗ್ರಾಮಸ್ಥರು, ಸಂಬಂಧಿಕರು ಮನೆಗೆ ಆಗಮಿಸಿ ಸಾಂತ್ವನ ಮಾತುಗಳನ್ನು ಹೇಳಿ ಹೋಗಿದ್ದಾರೆ. ಅಲ್ಲದೆ ಗ್ರಾಮಸ್ಥರು ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹಿಸಿದ್ದಾರೆ. ಆದರೆ ಇದುವರೆಗೆ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ.  ಕೃಷಿ ದುಡಿಮೆಯನ್ನು ನೆಚ್ಚಿ ಬದುಕು ಕಟ್ಟಿಕೊಂಡಿದ್ದ ತಂದೆ ಸಂಜೀವ ಮೂಲ್ಯ, ಬೀಡಿ ಸುತ್ತಿ ಮನೆ ಖರ್ಚು ನೋಡಿಕೊಳ್ಳುತ್ತಿದ್ದ ತಾಯಿ ಸರೋಜಿನಿ ಇಲ್ಲದೆ ಅಶ್ವಿತಾ ಅವರು ಹೊಸ ಬದುಕು ಕಟ್ಟಿಕೊಳ್ಳಬೇಕಾಗಿದೆ. ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ಈಕೆಯ ಮುಂದಿನ ಶಿಕ್ಷಣಕ್ಕೂ ಸಮಸ್ಯೆ ಎದುರಾಗಿದೆ.  ಇದನ್ನು ಮನಗಂಡ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಬಳಗವು ಅಶ್ವಿತಾ ಅವರಿಗೆ ನೆರವಾಗಲು ತೀರ್ಮಾನಿಸಿದೆ. ಅವರ ಮುಂದಿನ ಶೈಕ್ಷಣಿಕ ವರ್ಷದ ಕಾಲೇಜು ಫೀಸು, ಪುಸ್ತಕ ಇತ್ಯಾದಿ ಖರ್ಚುವೆಚ್ಚಗಳನ್ನು `ಕುಲಾಲ್ ವರ್ಲ್ಡ್’ ಭರಿಸಲಿದೆ. 


[yuzo_related]

Leave a Reply

Your email address will not be published. Required fields are marked *